ಹನೂರು: ಹಾಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು ಅಲ್ಲಿನ ಸ್ವಾಸ್ಥ್ಯ ಹದಗೆಡುತ್ತಿದೆ. ಆದ್ದರಿಂದ ಇದರ ಕಡಿವಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗೇಗೌಡ ತಿಳಿಸಿದರು.
ತಾಲೂಕಿನ ಕೌಳಿಹಳ್ಳ ಸೋಲಿಗರ ಹಾಡಿಯಲ್ಲಿ ಬುಧವಾರ ಗುಂಡಾಲ್ ಸರ್ಕಲ್ ಸೋಲಿಗರ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಹನೂರು ಭಾಗದಲ್ಲಿ ಬಹುತೇಕ ಗಿರಿಜನರು ಅರಣ್ಯ ಪ್ರದೇಶದೊಳಗಿದ್ದಾರೆ. ಪ್ರಕೃತಿ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಿದ್ದು, ಉತ್ತಮ ಆರೋಗ್ಯಕ್ಕೆ ವರದಾನವಾಗಿದೆ. ಆದರೆ ಬಹುತೇಕ ಹಾಡಿಗಳ ಮನೆ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸೋಲಿಗರು ಅದರಲ್ಲೂ ಯುವಕರು ಕುಡಿತದ ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಆರೋಗ್ಯ ಹದಗೆಡುತ್ತಿದ್ದು, ಜಗಳಕ್ಕೆ ಕಾರಣವಾಗಿ ಕುಟುಂಬಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅಕ್ರಮ ಮದ್ಯ ಮಾರಾಟ ಮಾಡದಂತೆ ಹಲವು ಸಭೆಗಳಲ್ಲಿ ತಿಳಿಸಿದ್ದರೂ ಕೆಲವರು ಮುಂದುವರಿಸುತ್ತಿದ್ದಾರೆ. ಈ ಬಗ್ಗೆ ಕಠಿಣ ನಿಲುವು ತೆಗೆದುಕೊಂಡು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿರುವುದು ಸೋಲಿಗರ ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ತಿಳಿಸಿದರು.
ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಎಂ.ರಂಗೇಗೌಡ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಜಮೀನಿನ್ನು ಪಡೆಯುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಈ ಕಾರ್ಯದಲ್ಲಿ ವಿಳಂಬ ನೀತಿಯನ್ನು ಅನುಸರಿಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಕಾಳಜಿ ವಹಿಸಬೇಕಿದ್ದು, ಅಧಿಕಾರಿಗಳನ್ನು ಭೇಟಿಯಾಗಿ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಇರುವ ಅಗತ್ಯ ಮೂಲಸೌಕರ್ಯದ ಕೊರತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಇನ್ನು ಐಪಿಎಚ್ ಸಂಸ್ಥೆಯಿಂದ ನೀಡಲಾಗುತ್ತಿರುವ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಯೋಜಕ ಜೆ. ಮಹದೇವಸ್ವಾಮಿ, ನಿರ್ದೇಶಕರಾದ ರಾಜಪ್ಪ, ಮುನಿರಾಜು, ಮುಖಂಡರಾದ ಕೇತೇಗೌಡ, ಈರೇಗೌಡ, ಸಿದ್ದೇಗೌಡ, ಮುತ್ತೇಗೌಡ, ಮಾದೇವ, ಕುಳ್ಳಮ್ಮ, ರಂಗಮ್ಮ ಇನ್ನಿತರರು ಇದ್ದರು.