ಜಿಲ್ಲೆ

ಕಾಡಾನೆ ಉಪಟಳಕ್ಕೆ ಕಡಿವಾಣ ಬೀಳಲಿ

ವಸಂತಕುಮಾರ್ ಬಿ

ಬೇಲೂರು: ತಾಲೂಕಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳದಿಂದ ಬೆಳೆ ನಷ್ಟದೊಂದಿಗೆ ಪ್ರಾಣ ಹಾನಿಯಂತಹ ಘಟನೆಗಳು ಸಂಭವಿಸುತ್ತಿದ್ದು, ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕೆಂದು ರೈತರು, ಬೆಳೆಗಾರರು ಒತ್ತಾಯಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೆ ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ಕಾಡಾನೆಯೊಂದು ಮಹಿಳೆಯನ್ನು ಬಲಿ ಪಡೆದಿದೆ. ಇದರ ನಡುವೆಯೇ ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ಸುತ್ತ ಮುತ್ತಲಿನ ಕಾಫಿ ತೋಟ, ಜಮೀನು ಸೇರಿದಂತೆ ವಾಸದ ಮನೆಯಂಗಳದಲ್ಲಿ ಬೆಳೆದಿರುವ ಬೆಳೆಗಳನ್ನು ಸಹ ಬಿಡದೆ ತಿಂದಿವೆ. ಅಲ್ಲದೆ ಲಿಂಗಾಪುರ ಗ್ರಾಮದ ಚಂದ್ರವತಿ, ಲಿಯಾ ಪಿಂಟೋ, ಜಾನಕಿ, ಸಂತೋಷ್ ಶೆಟ್ಟಿ ಸೇರಿದಂತೆ ಇತರರ ತೋಟಗಳಿಗೆ ನುಗ್ಗಿ ಸಾಕಷ್ಟು ವರ್ಷಗಳಿಂದ ಕಷ್ಟಪಟ್ಟು ಬೆಳೆದ ತೆಂಗು, ಅಡಕೆ, ಬಾಳೆ, ಪಪ್ಪಾಯ, ಕಾಫಿಯನ್ನೂ ಬಿಡದೆ ತಿಂದಿದ್ದಲ್ಲದೆ, ತುಳಿದು ನಷ್ಟ ಉಂಟು ಮಾಡಿವೆ. ಇದರಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವವರು ಬೀದಿಗೆ ಬೀಳುವಂತಾಗಿದ್ದು, ಕಾಡಾನೆಗಳಿಂದ ಇನ್ನಷ್ಟು ಬೆಳೆ ನಷ್ಟ, ಪ್ರಾಣ ಹಾನಿಯಾಗುವ ಮುನ್ನವೇ ಸರ್ಕಾರ ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂಬುದು ಮಲೆನಾಡಿಗರ ಆಗ್ರಹವಾಗಿದೆ.

ಬೆಳೆ ನಷ್ಟ ಅನುಭವಿಸಿದ ಲಿಂಗಾಪುರ ಗ್ರಾಮದ ಮೇರಿ ಲೋಬೊ ಮಾತನಾಡಿ, ಕಳೆದ 3-4 ದಿನಗಳಿಂದ ಗ್ರಾಮದ ಹಲವರ ತೋಟದಲ್ಲಿ ಕಾಡಾನೆಗಳು ಬೆಳೆಗಳನ್ನು ತಿಂದು ಹಾನಿ ಮಾಡಿದ್ದಲ್ಲದೆ, ಕಳೆದ ರಾತ್ರಿ 4-5 ಕಾಡಾನೆಗಳು ನಮ್ಮ ಮನೆಯಂಗಳಕ್ಕೆ ಬಂದು ಬಾಳೆ ತಿಂದು ಹಾಕಿವೆ. ಗೆಣಸನ್ನು ಸಹ ಬಿಡದೆ ಕಿತ್ತು ತಿಂದಿದ್ದಲ್ಲದೆ, ಇತರೆ ಬೆಳೆಗಳನ್ನು ಧ್ವಂಸ ಮಾಡಿವೆ. ಜತೆಗೆ ಮನೆಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ವೈರ್‌ಗಳನ್ನು ತುಂಡರಿಸಿವೆ. ಇದಕ್ಕೆ ಪ್ರಮುಖವಾಗಿ ಆನೆಗಳಿಗೆ ಕಾಡಿನಲ್ಲಿ ಆಹಾರ ಸಿಗದೇ ನಾಡಿಗೆ ಬರಲು ಕಾರಣ. ಆದ್ದರಿಂದ ಕಾಡಾನೆಗಳಿಗೆ ಬೆಕಾಗುವಷ್ಟು ಆಹಾರ ಕಾಡಿನಲ್ಲಿ ಸಿಕ್ಕಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲ. ಈಗ ಆಹಾರಕ್ಕಾಗಿ ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಆನೆಗಳ ಹಾವಳಿಗೆ ಸಿಲುಕಿ ಬೆಳೆ ನಷ್ಟ, ಪ್ರಾಣ ಹಾನಿಯಂತಹ ಘಟನೆಗಳು ನಡೆಯುತ್ತಿದ್ದು, ಇದನ್ಮು ತಪ್ಪಿಸಬೇಕೆಂದರೆ ಅರಣ್ಯ ಇಲಾಖೆಯಿಂದ ಕಾಡುಗಳಲ್ಲಿ ಆನೆಗಳಿಗೆ ಬೇಕಾದ ಆಹಾರದ ಗಿಡಗಳನ್ನು ಬೆಳೆಸಿ, ಇಲ್ಲಿರುವ ಕಾಡಾನೆಗಳನ್ನು ಕಾಡಿಗೆ ಸ್ಥಳಾಂತರಿಸಿದರೆ ಮಾತ್ರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಬಹುದು ಎಂದರು.

ಕಾಫಿ ಬೆಳೆಗಾರ ಸಂತೋಷ್ ಶೆಟ್ಟಿ ಮಾತನಾಡಿ, ನಮ್ಮ ಜಮೀನಿನಲ್ಲಿ7-8 ವರ್ಷಗಳಿಂದ ಪೋಷಿಸಿ ಬೆಳೆಸಿದ 700ಕ್ಕೂ ಹೆಚ್ಚಿನ ಅಡಕೆ, ತೆಂಗು, ಕಾಫಿ ಗಿಡ ಮರಗಳನ್ನು ಕಳೆದ 4-5 ವರ್ಷಗಳಿಂದ ನಿರಂತರವಾಗಿ ಕಾಡಾನೆಗಳ ದಾಳಿಗೆ ಬೆಳೆ ನಷ್ಟ ಅನುಭವಿಸಿದ್ದೇವೆ. ಈಗ 4-5 ದಿನಗಳಿಂದ ನಮ್ಮ ಗ್ರಾಮದಲ್ಲೆ ಬಿಡು ಬಿಟ್ಟಿರುವ ಆನೆಗಳು ಫಸಲಿಗೆ ಬಂದಿದ್ದ ಅಡಕೆ ಮರಗಳನ್ನು ಧ್ವಂಸ ಮಾಡಿವೆ. ಮುಂದಿನ ದಿನಗಳಲ್ಲಿ ಇನ್ನೇನು ಹಾನಿ ಮಾಡುತ್ತವೆಯೋ ಎಂಬ ಆತಂಕದಲ್ಲಿಯೇ ನಾವುಗಳು ಬದುಕುವಂತಾಗಿದೆ, ಇದಕ್ಕೆ ಸರ್ಕಾರವೇ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.