ಜಿಲ್ಲೆ

ಡೊನೇಷನ್ ಹಾವಳಿಗೆ ಕಡಿವಾಣ ಹಾಕಿ

ರವಿ ಎಸ್. ಬಳೂಟಗಿ

ರೋಣ: ವಿದ್ಯಾರ್ಥಿಗಳ ಪ್ರವೇಶಾತಿಗೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಶಾಲೆ, ಕಾಲೇಜ್ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ವತಿಯಿಂದ ಗುರುವಾರ ತಹಸೀಲ್ದಾರ್ ನಾಗರಾಜ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.

ಪರಿಷತ್ ತಾಲೂಕು ಅಧ್ಯಕ್ಷ ರಮೇಶ ನಂದಿ ಮಾತನಾಡಿ, ಈಗ ಎಲ್‌ಕೆಜಿ ಹಾಗೂ ಯುಕೆಜಿ ಪ್ರವೇಶ ಪಡೆಯಲು 40ರಿಂದ 50 ಸಾವಿರ ರೂ. ಫೀ ಕಟ್ಟಬೇಕಿದೆ. ಇಷ್ಟೊಂದು ಹಣ ನೀಡಿ ಪ್ರವೇಶ ಪಡೆಯಲು ಬಡವರಿಂದ ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಶಾಲೆ,ಕಾಲೇಜ್‌ಗಳಲ್ಲಿನ ಡೊನೇಷನ್ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ವಿರುದ್ಧ ಆಕ್ರೋಶ: ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸುವಂತೆ ಒತ್ತಾಯಿಸಿದರು. ಆದರೆ, 1 ತಾಸು ಕಾದರೂ ಬಾರದ ತಹಸೀಲ್ದಾರ್ ವಿರುದ್ಧ ವಿದ್ಯಾರ್ಥಿಗಳು ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಆಕ್ರೋಶ ಹೊರಹಾಕಿದರು. ನಂತರ ಬಂದ ತಹಸೀಲ್ದಾರ್ ನಾಗರಾಜ ಕೆ. ಮನವಿ ಸ್ವೀಕರಿಸಿದರು.

ಇದಕ್ಕೂ ಮುನ್ನ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪಟ್ಟಣದ ಸೂಡಿ ಸರ್ಕಲ್ ಮೂಲಕ ಮುಲ್ಲಾನಬಾವಿ ಕ್ರಾಸ್, ಪುರಸಭೆ ಮುಂದಿನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಡಿ.ಜೆ. ಕಟ್ಟಿಮನಿ, ಮಾರುತಿ ಹಾದಿಮನಿ, ಮಂಜು ಬುರಡಿ, ಶೇಖಪ್ಪ ಮಾದರ, ಮರಿಯಪ್ಪ ಮಾದರ, ಅಭಿಷೇಕ ಕೊಪ್ಪದ, ರಮೇಶ ನಂದಿ, ಹನುಮಂತ ಚಲವಾದಿ, ಸುರೇಶ ಚಲವಾದಿ, ವಿಜಯ ಚಲವಾದಿ, ಬಸವರಾಜ ಕಾಳೆ, ರಾಮಕೃಷ್ಟ ದೊಡ್ಡಮನಿ, ಸಂತೋಷ, ಮೈಲಾರಪ್ಪ ಮಾದರ, ಭೀಮಪ್ಪ ಮಾದರ, ಮಲ್ಲು ಮಾದರ, ಪರಶು ಮಾದರ ಇತರರು ಇದ್ದರು.