ಲಿಂಗಸಗೂರು: ತಾಲೂಕಿನಲ್ಲಿ ಶಿಕ್ಷಣ ಇಲಾಖೆ ನಿಯಮ ಪಾಲಿಸದ 50ಕ್ಕೂ ಹೆಚ್ಚು ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ನಾಗವಾರಬಣ) ಕಾರ್ಯಕರ್ತರು ಮಂಗಳವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ವ್ಯಾಪಕ ಪ್ರಚಾರಗೈದ ಕೆಲ ಕೋಚಿಂಗ್ ಸೆಂಟರ್‌ಗಳು ಶಿಕ್ಷಣ ಇಲಾಖೆ ಪರವಾನಗಿ ಪಡೆಯದೆ ಆರಂಭಿಸಿವೆ. ಬೇರೆ ಶಾಲೆಯ ವಿಳಾಸ ಮತ್ತು ದಾಖಲೆ ನೀಡಿ ನಂತರದಲ್ಲಿ ಶೆಡ್ ಅಥವಾ ಮೂಲ ಸೌಕರ್ಯವಿಲ್ಲದ ಕಡೆ ನಡೆಸಲಾಗುತ್ತದೆ. ಇಲಾಖೆ ಪರಿಶೀಲಿಸಿದರೆ ಅಕ್ರಮ ಬಯಲಾಗಲಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಮಾನದಂಡಗಳನ್ನು ಅನುಸರಿಸದೆ ರಾಜಾರೋಷವಾಗಿ ಬ್ಯಾನರ್, ಭಿತ್ತಿ ಪತ್ರಗಳ ಮೂಲಕ ಪ್ರಚಾರ ಮಾಡಿ ಕೋಚಿಂಗ್ ಸೆಂಟರ್ ದಂಧೆಗಿಳಿದಿವೆ ಎಂದು ಆರೋಪಿಸಿದರು.
ಶಿಕ್ಷಣ ಇಲಾಖೆ ಉಪನಿರ್ದೇಶಕರು ಅನಧಿಕೃತ ಕೋಚಿಂಗ್ ಸೆಂಟರ್ ಮುಚ್ಚುವ ಬಗ್ಗೆ ಬಿಇಒಗಳಿಗೆ ಆದೇಶ ಕೂಡ ನೀಡಿದ್ದಾರೆ. ಆಯುಕ್ತರು ಸಹ ತಕ್ಷಣ ಪರಿಶೀಲಿಸಿ ಮಾಹಿತಿ ಸಲ್ಲಿಸಲು ಸೂಚಿಸಿದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ದುರದೃಷ್ಟಕರ.
ಬಿಇಒಗಳು ನೆಪ ಮಾತ್ರಕ್ಕೆ ನೋಟಿಸ್ ನೀಡಿದ್ದು, ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಿಸಿದ ಉದಾಹರಣೆಗಳಿಲ್ಲ. ಆದ್ದರಿಂದ ತನಿಖಾ ತಂಡ ರಚಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.