ಬಾಳೆಹೊನ್ನೂರು: ಕಳೆದ ಆರು ದಿನಗಳಿಂದ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಪುಷ್ಯ ಮಳೆಯು ಮೊದಲ ದಿನವೇ ಅಬ್ಬರಿಸಿದೆ.
ಬಾಳೆಹೊನ್ನೂರು ಸಮೀಪದ ಮಾಗುಂಡಿ ಮೂಲಕ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತು ಮೇಲ್ಭಾಗದಲ್ಲಿ ಶುಕ್ರವಾರ ಭದ್ರಾನದಿಯ ನೀರು ಉಕ್ಕಿ ಹರಿದಿದ್ದು, ಆ ಭಾಗಕ್ಕೆ ಸಂಚರಿಸುವ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಇನ್ನು ಈ ಸೇತುವೆ ಸೈಡ್‌ವಾಲ್‌ಗಳ ಬದಿಯಲ್ಲಿ ಕುಸಿತ ಆಗುತ್ತಿದ್ದು ಸೇತುವೆಗೆ ಹಾನಿಯಾಗುವ ಆತಂಕ ಎದುರಾಗಿದೆ.
ಬಾಳೆಹೊನ್ನೂರು ಪಿಎಸ್‌ಐ ರವೀಶ್ ನೇತೃತ್ವದಲ್ಲಿ ಪೊಲೀಸರು ಮಹಲ್ಗೋಡಿಗೆ ತೆರಳಿ ಸೇತುವೆ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದರು. ಹೊರನಾಡು ಕಳಸ ತೆರಳುವ ಪ್ರಯಾಣಿಕರು ಬದಲಿ ಮಾರ್ಗವಾಗಿ ಬಾಳೆಹೊನ್ನೂರು-ಮಾಗುಂಡಿ-ಬಾಳೂರು-ಹಿರೇಬೈಲು-ಕಳಸ- ಹೊರನಾಡು ಹಾಗೂ ಬಾಳೆಹೊನ್ನೂರು-ಜಯಪುರ-ಬಸರೀಕಟ್ಟೆ-ಬಾಳೆಹೊಳೆ- ಕಳಸ-ಹೊರನಾಡುಗೆ ಹೋಗುವಂತೆ ಸೂಚಿಸಿದರು.
ಮಾಗುಂಡಿ ಸಮೀಪದ ತೆಪ್ಪದಗಂಡಿ ಬಳಿಯೂ ಮುಖ್ಯರಸ್ತೆಯಲ್ಲಿ ಭದ್ರಾ ನದಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಭದ್ರಾನದಿಯಲ್ಲಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿರುವುದಲ್ಲದೇ ಹಲವು ತೋಟ, ಗದ್ದೆಗಳಿಗೆ ನೀರು ನುಗ್ಗಿದ್ದು, ಹಲವಾರು ಗಂಟೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು.
ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮುಖ್ಯರಸ್ತೆಗೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮರ ಬಿದ್ದಿದೆ. ಮಳೆಯೊಂದಿಗೆ ನಿರಂತರ ಗಾಳಿಯೂ ಬೀಸುತ್ತಿದ್ದು, ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ಹಾನಿಯಾಗಿವೆ. ಹಲವಾರು ಗ್ರಾಮಗಳು ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಇಲ್ಲದೇ ಕತ್ತಲಲ್ಲಿ ಮುಳುಗಿವೆ.