ಮಂಗಳೂರು: ಪದವು ಕೊಪ್ಪಲಕಾಡು ನಿವಾಸಿ ಜಗದೀಶ್ ದಾಸ್ ಅವರ ಮನೆಯ ಡ್ರಾವರ್ ನಲ್ಲಿ ಇರಿಸಿದ್ದ ಸುಮಾರು 49 ಗ್ರಾಂ.ನ 6.37 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಪರ್ಸ್ ಕಳವಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗದೀಶ್ ದಾಸ್ ಅವರ ಮನೆಯಲ್ಲಿ ಜು.8ರಂದು ವಿವಿಧ ಕಾಮಗಾರಿ ನಡೆದಿತ್ತು. ಮೂರು ಮಂದಿ ಕಾರ್ಮಿಕರು ಅದರ ಕೆಲಸ ಮಾಡಿದ್ದರು. ಈ ಸಂದರ್ಭ ಜಗದೀಶ್ ಅವರು 20 ಗ್ರಾಂ. ತೂಕದ ಚಿನ್ನದ ಕಡಗ, 17 ಗ್ರಾಂ. ತೂಕದ ಪೆಂಡೆಂಟ್ ಇರುವ ಚೈನ್, 8 ಗ್ರಾಂ. ನವಗ್ರಹ ಉಂಗುರ, 4 ಗ್ರಾಂ. ಚಿನ್ನದ ಸಾದಾ ಉಂಗುರ, 2 ಸಾವಿರ ರೂ. ಮೌಲ್ಯದ ಗೋಲ್ಡ್ ಕೊಟೆಡ್ ವಾಚನ್ನು ಒಂದು ಪರ್ಸ್ ನಲ್ಲಿಟ್ಟು ಕಬ್ಬಿಣದ ಆಫೀಸ್ ಟೇಬಲ್ ನ ಡ್ರಾವರ್ ನಲ್ಲಿ ಇಟ್ಟಿದ್ದರು. ಅದಕ್ಕೆ ಬೀಗವನ್ನು ಹಾಕಿರಲಿಲ್ಲ.
ಜು.16ರಂದು ಬೆಳಗ್ಗೆ ಟೇಬಲ್ ನ ಡ್ರಾವರನ್ನು ತೆರದು ನೋಡುವಾಗ ಅದರಲ್ಲಿ ಚಿನ್ನಾಭರಣ ಇಟ್ಟಿದ್ದ ಪರ್ಸ್ ಇರಲಿಲ್ಲ. ಈ ಬಗ್ಗೆ ಮನೆಯರಲ್ಲಿ ವಿಚಾರಿಸಿದಾಗ ಯಾರು ತೆಗೆದಿರುವುದಿಲ್ಲ ಎಂದು ತಿಳಿಸಿದ್ದಾರೆ. ಮನೆಗೆ ಕೆಲಸಕ್ಕೆ ಬಂದಿರುವ ಕೆಲಸಗಾರರಲ್ಲಿ ಯಾರೋ ಕಳವು ಮಾಡಿದ್ದಾರೆ ಎನ್ನುವ ಸಂಶಯವಿದೆ ಎಂದು ಆರೋಪಿಸಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.