ಹೊಳೆನರಸೀಪುರ: ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ ಕನ್ನಡ ರಥವನ್ನು ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸದಸ್ಯರು ಪೂರ್ಣಕುಂಭ ಸ್ವಾಗತ ನೀಡಿದರು.
ಅರಕಲಗೂಡಿನಿಂದ ಆಗಮಿಸಿದ ರಥಕ್ಕೆ ಅರಕಲಗೂಡು ರಸ್ತೆಯ ಸೋಷಿಯಲ್ ಕ್ಲಬ್ ಸಮೀಪ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಥ ಗಾಂಧಿ ವೃತ್ತದ ಮೂಲಕ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ಹಾಸನ-ಮೈಸೂರು ರಸ್ತೆಯ ಮೂಲಕ ಅಂಬೇಡ್ಕರ್ ವೃತ್ತದ ಸಮೀಪ ಆಗಮಿಸಿದಾಗ ಸಂಸದ ಶ್ರೇಯಸ್ ಪಟೇಲ್ ಅಂಬೇಡ್ಕರ್ ಪ್ರತಿಮೆಗೆ ಮೊದಲು ಮಾಲಾರ್ಪಣೆ ಮಾಡಿದರು. ಕನ್ನಡ ರಥದಲ್ಲಿನ ಶ್ರೀ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿದರು. ನಂತರ ಮೆರವಣಿಗೆ ಕೋಟೆ ರಥ ಬೀದಿಯಲ್ಲಿ ಸಾಗಿ ಮಹಾಗಣಪತಿ ಪೆಂಡಾಲ್‌ಗೆ ಆಗಮಿಸಿತು.
ತಹಸೀಲ್ದಾರ್ ಕೆ.ಕೆ. ಕೃಷಮೂರ್ತಿ ಮಾತನಾಡಿ, ಕನ್ನಡ ನಾಡಿಗೆ ಹಿರಿಮೆ, ಗಿರಿಮೆ ಸಾರಲು ಹಾಗೂ ಕನ್ನಡ ಭಾಷೆಯ ಉಳಿವಿಗೆ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ಹೇಳಿದರು.
ಸಾಹಿತಿ ನಾಗೇಶ್ ಕೌಂಡಿನ್ಯ ಮಾತನಾಡಿ, ಅತ್ಯಂತ ಪುರಾತನ ಕನ್ನಡ ಭಾಷೆ ಕನ್ನಡ ನಾಡಿನಲ್ಲೇ ಸೋರಗುತ್ತಿದೆ. ಕನ್ನಡ ನಾಡಿನ
ಜನರು ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು ಎಂದರು.
ಪುರಸಭಾಧ್ಯಕ್ಷ ಕೆ.ಶ್ರೀಧರ್, ಉಪಾಧ್ಯಕ್ಷೆ ಸಾವಿತ್ರಮ್ಮ, ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಸಾಹಿತಿ ನಾಗೇಶ್ ಕೌಂಡಿನ್ಯ, ಜಿಲ್ಲಾ ಪಂಚಾಯಿತಿ ಎಇಇ ಪ್ರಶಾಂತ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಓಹಿಲೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಕೆ.ಆರ್. ಸುದರ್ಶನ್, ಮುರಳಿಧರ್ ಗುಪ್ತಾ, ಕುಮುದಾ, ನಿವೃತ್ತ ಉಪನ್ಯಾಸಕ ಪ್ರಭುಶಂಕರ್, ನಗರ ಠಾಣೆ ಎಸ್.ಐ.ಅಭಿಜಿತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಂಜುನಾಥ್, ಜೈಪ್ರಕಾಶ್, ನಿವೃತ್ತ ಯೋಧ ಈಶ್ವರ್, ಶಂಕರ ನಾರಾಯಣ್ ಐತಾಳ್ ಇತರರು ಇದ್ದರು.