ಜಿಲ್ಲೆ

ಶುದ್ಧ ಮನಸ್ಸು, ಪ್ರಾಮಾಣಿಕ ಕೆಲಸ ವ್ಯಕ್ತಿಯ ಶಕ್ತಿ

ಶಿರಸಿ: ಶುದ್ಧ ಮನಸ್ಸು ಹಾಗೂ ಪ್ರಾಮಾಣಿಕ ಕೈಂಕರ್ಯ ಕೈಗೊಂಡರೆ ವ್ಯಕ್ತಿಯೋರ್ವ ಶಕ್ತಿಯಾಗಿ ಸಮಾಜದ ಚಿಂತನೆಯಲ್ಲಿ ಪ್ರವಹಿಸುತ್ತಿರುತ್ತಾನೆ ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಬುಧವಾರ ಯಕ್ಷಗಾನದ ಹಿರಿಯ ವಿದ್ವಾಂಸ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ. ಎಂ.ಎ.ಹೆಗಡೆ ಅವರ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಬೇಕು, ಸರಳತೆ ಇರಬೇಕು, ಸತ್ಯ ಮಾರ್ಗದಲ್ಲಿ ಅಹಂಕಾರ ಇಲ್ಲದೆ ಗುರಿ ಸಾಧನೆ ಮಾಡಬೇಕು. ಹಾಗಾದರೆ ಶಾಶ್ವತ ಇತಿಹಾಸ ಸೃಷ್ಟಿಯಾಗುತ್ತದೆ. ಎಂ.ಎ. ಹೆಗಡೆ ಅವರು ಯಕ್ಷಗಾನ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯವಾಗಿದ್ದಾರೆ ಎಂದರು. ಹೆಗಡೆ ಅವರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು.
ನುಡಿನಮನ ಸಲ್ಲಿಸಿದ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ, ಬದುಕು ಹಾಗೂ ವೃತ್ತಿಯಲ್ಲಿ ಮಾಗಿದರೂ ಗುರು-ಹಿರಿಯರಿಗೆ ಬಾಗುವ ವ್ಯಕ್ತಿತ್ವ ಎಲ್ಲರಿಗೂ ಇರುವುದಿಲ್ಲ. ಆದರೆ, ಎಂ.ಎ. ಹೆಗಡೆ ಅವರ ಪ್ರಭಾವವೇ ವಿಶೇಷ. ಅವರು ಸಮಾಜ, ಕಲಾವಿದರು, ಕಲಾಸಕ್ತರಿಗೆಲ್ಲ ಬೇಕಾದವರಾಗಿದ್ದರು ಎಂದರು.
ಕಟುವಾಗಿ ಟೀಕಿಸುವ ಜತೆ ಸೂಕ್ತ ಮಾರ್ಗದರ್ಶನ ನೀಡುವ, ತಿದ್ದಿ ತೀಡುವ ಕಾರ್ಯದಲ್ಲಿ ಅದ್ವಿತೀಯರಾಗಿದ್ದ ಅವರು, ಅಸಾಧಾರಣ ಪ್ರತಿಸ್ಪಂದಿಯಾಗಿದ್ದರು. ಭಾಷಾಂತರ ವಿಭಾಗದಲ್ಲಿ ವಿಶೇಷ ಕಾರ್ಯ ಮಾಡಿದ್ದ ಅವರಿಗೆ ಗೌರವ ಡಾಕ್ಟರೇಟ್ ಲಭಿಸಬೇಕಿತ್ತಾದರೂ ಅವರನ್ನು ಅವಗಣನೆ ಮಾಡಿದ್ದು ಖೇದಕರ ಸಂಗತಿ ಎಂದರು.
ಸಂಕಲ್ಪ ಸೇವಾ ಸಂಸ್ಥೆಯ ಪ್ರಮೋದ ಹೆಗಡೆ, ಶಿವಾನಂದ ಹೆಗಡೆ ಕೆರೆಮನೆ ಹಾಗೂ ಇತರರಿದ್ದರು. ಯಕ್ಷ ಶಾಲ್ಮಲಾದ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಅಧ್ಯಕ್ಷತೆ ವಹಿಸಿದ್ದರು. ಜಿ.ಜಿ.ಹೆಗಡೆ ಕನೇನಹಳ್ಳಿ ಸ್ವಾಗತಿಸಿದರು. ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ನಿರೂಪಿಸಿದರು. ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮೌನಾಚರಣೆ ಹಾಗೂ ಪ್ರೊ. ಎಂ. ಎ. ಹೆಗಡೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ನಂತರ ಭಾಗವತರಾದ ಕೇಶವ ಹೆಗಡೆ ಕೊಳಗಿ, ಸತೀಶ ದಂಟ್ಕಲ್, ಅನಂತ ದಂತಳಿಕೆ, ಗಜಾನನ ತುಳಗೇರಿ ಗಾಯನ ನಮನ ಸಲ್ಲಿಸಿದರು. ಮದ್ದಳೆಯಲ್ಲಿ ನರಸಿಂಹ ಭಟ್ಟ ಹಂಡ್ರಮನೆ ಸಾಥ್ ನೀಡಿದರು. ಚಿತ್ರಕಾರ ಸತೀಶ ಯಲ್ಲಾಪುರ ಅವರಿಂದ ಚಿತ್ರ ನಮನ ಕಾರ್ಯಕ್ರಮ ನಡೆಯಿತು.</