ಜಿಲ್ಲೆ

ಮಾರುಕಟ್ಟೆ ಮಧ್ಯಾಹ್ನ ತನಕ ಬಿರುಸಿನ ಖರೀದಿ

Dakshina Kannada

ಮಂಗಳೂರು: ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ವ್ಯಾಪಾರ ಚಟುವಟಿಕೆ ಆರಂಭವಾಗಿದ್ದು, ಮಧ್ಯಾಹ್ನ ತನಕ ಮುಂದುವರಿಯಿತು. 12 ಗಂಟೆಯ ಬಳಿಕವೂ ಬಂದ್ ಮಾಡದ ಅಂಗಡಿಗಳನ್ನು ಮನಪಾ ಅಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಬಂದ್ ಮಾಡಿಸಿದರು.

ಹಾಸನ, ಶಿವಮೊಗ್ಗ, ಮೈಸೂರು, ಮಂಡ್ಯ ಮೊದಲಾದ ಕಡೆಗಳಿಂದ ಬೆಳಗ್ಗಿನ ಜಾವ ತರಕಾರಿ ಲೋಡ್‌ಗಳು ಮಂಗಳೂರು ಸೆಂಟ್ರಲ್ ಮಾರುಟಕ್ಟೆಗೆ ಬಂದು ಅನ್‌ಲೋಡ್ ಆಗಿವೆ. ಬೆಳಕು ಮೂಡುತ್ತಿದ್ದಂತೆ ಸಾರ್ವಜನಿಕರು ಮಾರುಕಟ್ಟೆ ಕಡೆಗೆ ಬರಲಾರಂಭಿಸಿದರು. 7 ಗಂಟೆ ವೇಳೆಗೆ ತರಕಾರಿ, ದಿನಸಿ, ಹಣ್ಣು, ಸೊಪ್ಪು ಖರೀದಿಗೆ ಗ್ರಾಹಕರು ಮುಗಿಬಿದ್ದರು.

ಸೆಂಟ್ರಲ್ ಮಾರುಕಟ್ಟೆಗೆ ಬಂದವರಲ್ಲಿ ಶೇ.50ರಷ್ಟು ಮಂದಿ ಗ್ರಾಹಕರು ಮಾಸ್ಕ್ ಧರಿಸಿರಲಿಲ್ಲ. ಬೆರಳೆಣಿಕೆ ವ್ಯಾಪಾರಿಗಳಷ್ಟೇ ಮಾಸ್ಕ್ ಧರಿಸಿದ್ದರು. ಕರೊನಾ ಸೋಂಕು ಹರಡದಂತೆ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸರ್ಕಾರ ನೀಡಿದ ಸೂಚನೆಯನ್ನು ಬಹುತೇಕ ಮಂದಿ ಪಾಲನೆ ಮಾಡಿದಂತೆ ಕಂಡುಬಂದಿಲ್ಲ.

ಮಾರುಕಟ್ಟೆಯ ಸುತ್ತಮುತ್ತ ತಳ್ಳುಗಾಡಿಗಳಲ್ಲಿ ಹಣ್ಣು, ಸೊಪ್ಪು ಹಾಗೂ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಇಲ್ಲಿನ ಸಿಹಿ ತಿಂಡಿ, ದಿನಸಿ, ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಗ್ರಾಹಕರು ನೂಕುನುಗ್ಗಲು ನಡೆಸಿದರು. ಹೆಚ್ಚಿನ ಮಂದಿ ಕಾರುಗಳಲ್ಲಿ ಬಂದ ಕಾರಣ ವಾಹನ ದಟ್ಟಣೆಯೂ ಉಂಟಾಯಿತು. ಗ್ರಾಹಕರು ಒಂದು ವಾರಕ್ಕಾಗುವಷ್ಟು ತರಕಾರಿ ಹಾಗೂ ದಿನಸಿ ಸಾಮಗ್ರಿ ಖರೀದಿಸಿ ಕೊಂಡೊಯ್ಯುತ್ತಿದ್ದ ದೃಶ್ಯ ಕಂಡು ಬಂತು.

ನಗರದ ಕಂಕನಾಡಿ, ಉರ್ವ, ಮಲ್ಲಿಕಟ್ಟೆ, ಬಿಜೈ ಮೊದಲಾದ ಮಾರುಕಟ್ಟೆಗಳಲ್ಲೂ ಗ್ರಾಹಕರು ವಸ್ತುಗಳ ಖರೀದಿಗೆ ಮುಗಿಬಿದ್ದರು. ನಗರದಲ್ಲಿ ಓಡಾಡುತ್ತಿದ್ದ ಬಹುತೇಕ ಮಂದಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದಂತೆ ಕಂಡು ಬಂದಿಲ್ಲ. ಮಧ್ಯಾಹ್ನದ ವೇಳೆಗೆ ನಗರ ಸಂಪೂರ್ಣ ಸ್ತಬ್ಧಗೊಂಡಿತು.

ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ನಗರದ ಮಾರುಕಟ್ಟೆಗಳನ್ನು ಮಧ್ಯಾಹ್ನ 12 ಗಂಟೆ ನಂತರವೂ ಬಂದ್ ಮಾಡದ ಬಗ್ಗೆ ಮಾಹಿತಿ ಪಡೆದ ಮನಪಾ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪೊಲೀಸರ ಮೂಲಕ ಅಂಗಡಿಗಳನ್ನು ಬಂದ್ ಮಾಡಿಸಿದರು.

ತರಕಾರಿ ದರ ಹೆಚ್ಚಳ, ಮೀನು ಮಾರಾಟ ಡಲ್: ಮಾರುಕಟ್ಟೆಗಳಲ್ಲಿ ಬೆಳಗ್ಗೆ ಸೊಪ್ಪು, ಹಣ್ಣು, ತರಕಾರಿಗಳ ದರ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದುದು ಕಂಡು ಬಂತು. ಮಧ್ಯಾಹ್ನ ಮುಚ್ಚುವ ವೇಳೆ ಅರ್ಧ ದರದಲ್ಲಿ ಮಾರಾಟ ಮಾಡಿದ್ದಾರೆ. ಬೆಳಗ್ಗೆ ತರಕಾರಿಗಳನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡಿದರೂ ಗ್ರಾಹಕರು ಖರೀದಿ ಮಾಡಿದ್ದಾರೆ. ದಕ್ಕೆ, ಸ್ಟೇಟ್‌ಬ್ಯಾಂಕ್, ಬಿಜೈ ಮೊದಲಾದ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದ ಮೀನು ಮಾರಾಟ ನಡೆದಿದ್ದರೂ, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಬೈಕ್, ರಿಕ್ಷಾ ಟೆಂಪೋಗಳಲ್ಲಿ ಮನೆ ಮನೆಗೆ ಮೀನು ಮಾರಾಟವೂ ಎಂದಿನಂತೆ ನಡೆದಿದೆ. ದಕ್ಕೆಯಿಂದ ಹೊರ ಜಿಲ್ಲೆಗೆ ಮೀನು ಸಾಗಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಮೀನು ಸಾಗಾಟದ ಲಾರಿಗಳು ದಕ್ಕೆಯ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದವು. ಕೋಳಿ ಮಾಂಸ ಮಾರಾಟದ ಅಂಗಡಿಗಳು ತೆರೆದಿದ್ದವು. ಆದರೆ ಬೆರಳೆಣಿಕೆಯ ಗ್ರಾಹಕರಷ್ಟೇ ಕೋಳಿ, ಆಡು ಮಾಂಸ ಖರೀದಿಸಿದರು.

ಯುಗಾದಿಗೆ ಖರೀದಿ ಇಲ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುಗಾದಿ ದೊಡ್ಡ ಮಟ್ಟದ ಆಚರಣೆ ಇಲ್ಲದಿದ್ದರೂ, ಕೆಲವರು ಸಾಂಪ್ರದಾಯಿಕವಾಗಿ ಧಾರ್ಮಿಕ ಕಾರ್ಯ ಕ್ರಮಗಳನ್ನು ನಡೆಸುತ್ತಾರೆ. ಆದರೆ ಈ ಬಾರಿ ಯುಗಾದಿಗೆ ಯಾವುದೇ ವಿಶೇಷ ಖರೀದಿ ಕಂಡು ಬಂದಿಲ್ಲ. ವ್ಯಾಪಾರಿಗಳೂ ಯುಗಾದಿಗೆ ಬೇಕಾದ ವಸ್ತುಗಳನ್ನು ಅಂಗಡಿಗಳಲ್ಲಿ ತಂದಿಟ್ಟಿಲ್ಲ.