ವಿಜಯಪುರ: ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿಗೆ ಮಾಲ್ದಂಡಿ ಬಿಳಿಜೋಳ ಖರೀದಿಸಲಾಗುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಮಾಲ್ದಂಡಿ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.3,421 ಹಾಗೂ ಹೈಬ್ರಿಡ್ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.3,371 ರಂತೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದ್ದು, ಜಿಲ್ಲೆಯ ರೈತರಿಂದ ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದ್ದು, ಇವರು ಜಿಲ್ಲೆಯಲ್ಲಿ ರೈತರ ನೋಂದಣಿ ಕಾರ್ಯ ಕೈಗೊಳ್ಳಲಿದ್ದು, ಮಾ.31ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಏಳು ಖರೀದಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದು, ವಿಜಯಪುರದ ಎಪಿಎಂಸಿ ಆವರಣ, ಬಸವನ ಬಾಗೇವಾಡಿಯ ಎಪಿಎಂಸಿ ಆವರಣ, ತೆಲಗಿ ರೈಲ್ವೆ ನಿಲ್ದಾಣ ಹತ್ತಿರ, ಮುದ್ದೇಬಿಹಾಳದ ಎಸ್‌ಡಬ್ಲ್ಯುಸಿ ಬಿದರಕುಂದಿ, ತಾಳಿಕೋಟೆಯ ಸರ್ಕಾರಿ ಆಸ್ಪತ್ರೆ ಹಿಂದುಗಡೆ, ಇಂಡಿಯ ಕೆಇಬಿ ಹತ್ತಿರ ಹಾಗೂ ಸಿಂದಗಿಯ ಗೋಲಗೇರಿ ರೋಡ್‌ನಲ್ಲಿ ಸ್ಥಾಪಿಸಲಾಗಿದೆ.
ಮಾಹಿತಿಗಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರಗಳನ್ನು ಹಾಗೂ ವಿಜಯಪುರದ ಕೆಎಫ್‌ಸಿಎಸ್‌ಸಿ ನಿಗಮದ ಜಿಲ್ಲಾ ವ್ಯವಸ್ಥಾಪಕರ (ಮೊ.9448496016)ನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.