ಬೆಳಗಾವಿ: ಕೋವಿಡ್-19ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರ ಕುಟುಂಬಗಳಿಂದ ನೇರವಾಗಿ ಸೀರೆ ಖರೀದಿಸುವುದು ಹಾಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ನೇಕಾರರ ಮುಖಂಡರ ಸಭೆಯಲ್ಲಿ ಮಾತನಾಡಿ, ಹೊಲಿಗೆ ಯಂತ್ರ ಖರೀದಿ, ವಿದ್ಯುತ್ ಮಗ್ಗಗಳ ಅಳವಡಿಕೆ ಸೇರಿ ನೇಕಾರರಿಗೆ ನೀಡಲಾಗುವ ಸೌಲಭ್ಯಗಳ ಹಂಚಿಕೆಯ ಮಾರ್ಗಸೂಚಿ ಇನ್ನಷ್ಟು ಸರಳೀಕರಣಗೊಳಿಸಲಾಗುತ್ತಿದೆ. ನೇಕಾರ ಕುಟುಂಬಗಳ ಸಮೀಕ್ಷೆ ಕೈಗೊಂಡು ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡು ತಿಂಗಳ ಬಳಿಕ ಈ ಕೆಲಸ ಆಗಲಿದೆ ಎಂದರು.
ನೇಕಾರರ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿವೆ. ಅವರಿಗೆ ಸರ್ಕಾರದ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನೇಕಾರರ ಪರಿಸ್ಥಿತಿಯ ಅರಿವು ಇರುವುದರಿಂದ ನೇಕಾರರ ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಕೇಂದ್ರದೊಂದಿಗೆ ಚರ್ಚೆ: ಕೂಲಿ ನೇಕಾರರನ್ನು ಕೂಡ ಅಸಂಘಟಿತ ವಲಯದ ಕಾರ್ಮಿಕರು ಎಂದು ಗುರುತಿಸುವ ಬಗ್ಗೆ ಸೂಕ್ತ ಪ್ರಸ್ತಾವ ರೂಪಿಸಿ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ. ಸಾಲ ಸೇರಿ ನೇಕಾರರಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಲು ಕೇಂದ್ರ ಸರ್ಕಾರ ಕೈಜೋಡಿಸಿದರೆ ಇನ್ನಷ್ಟು ಅನುಕೂಲ ಆಗಲಿದೆ. ಈ ಬಗ್ಗೆ ಕೇಂದ್ರ ಸಚಿವರ ಜತೆಯೂ ಚರ್ಚಿಸಲಾಗಿದೆ ಎಂದರು.
ಸೀರೆ ಖರೀದಿ ಅಥವಾ ಲಭ್ಯವಿರುವ ದಾಸ್ತಾನಿನ ಮೇಲೆ ಸಾಲ ನೀಡುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಶಾಸಕ ಅಭಯ ಪಾಟೀಲ ಮಾತನಾಡಿ, ಈಗಾಗಲೇ ನೇಕಾರರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ. ಮುಖ್ಯವಾಗಿ ನೇಕಾರರು ಉತ್ಪಾದಿಸಿರುವ ಸೀರೆಗಳನ್ನು ಸರ್ಕಾರವೇ ಖರೀದಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಿಸಾನ್ ಸಮ್ಮಾನ್ ಮಾದರಿಯಲ್ಲಿ ನೇಕಾರ ಸಮ್ಮಾನ್ ನಿಧಿ ಸ್ಥಾಪಿಸಬೇಕು. ಕರೊನಾ ಹಿನ್ನೆಲೆಯಲ್ಲಿ ಕಾರ್ಮಿಕರು, ಚಾಲಕರು ಸೇರಿ ಉಳಿದವರಿಗೆ 5 ಸಾವಿರ ರೂ. ನೆರವು ನೀಡಿ ನೇಕಾರರಿಗೆ ಮಾತ್ರ 2 ಸಾವಿರ ರೂ. ಪ್ರಕಟಿಸಲಾಗಿದ್ದು, ಈ ತಾರತಮ್ಯ ಸರಿಪಡಿಸಬೇಕು ಎಂದರು.
ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆ ಪರಿಹಾರದ ಕುರಿತು ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗುವುದು. ಈ ಸಭೆಗೆ ನೇಕಾರರ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಅಭಯ ಪಾಟೀಲ ಹೇಳಿದರು.
ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವಿ.ಮಾತನಾಡಿ, ಎಂಎಸ್‌ಎಂಇ ಅಡಿ ಸಾಲ ತೆಗೆದುಕೊಂಡಿದ್ದರೆ ಸದ್ಯಕ್ಕೆ ರಿಕವರಿ ಕೈ ಬಿಡುವುದರ ಜತೆಗೆ ಹೆಚ್ಚುವರಿ ಸಾಲ ನೀಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಬಗ್ಗೆ ಬ್ಯಾಂಕರ್ಸ್ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಕೀರ್ತಪ್ಪ ಗೋಟೂರ ಮಾತನಾಡಿ, ಕರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 5 ಸಾವಿರಕ್ಕೂ ಅಧಿಕ ಕೈಮಗ್ಗ ನೇಕಾರರಿಂದ ದಾಖಲಾತಿ ಪಡೆದುಕೊಳ್ಳಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಘೋಷಿಸಿರುವ ಪರಿಹಾರಧನ ಶೀಘ್ರ ಜಮಾ ಮಾಡಲಾಗುವುದು. ಅದೇ ರೀತಿ ವಿದ್ಯುತ್ ಮಗ್ಗದ ಮಾಲೀಕರಿಗೂ ಪರಿಹಾರ ನೀಡಲಾಗುವುದು ಎಂದರು. ನೇಕಾರರ ಸಾಲಮನ್ನಾ ಸೇರಿ ಅನೇಕ ಬೇಡಿಕೆಗಳನ್ನು ನೇಕಾರರ ಮುಖಂಡರು ಸಚಿವರ ಮುಂದಿಟ್ಟರು. ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ ಇದ್ದರು. ನೇಕಾರ ಸಮುದಾಯದ ಮುಖಂಡರಿಂದ ಸಚಿವ ಶ್ರೀಮಂತ ಪಾಟೀಲ ಅವರು ಮನವಿ ಸ್ವೀಕರಿಸಿದರು.