ಜಿಲ್ಲೆ

ಉತ್ತರ ಕರ್ನಾಟಕ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿಸಲಾಗುವುದು. ಈಗಾಗಲೇ 375 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಲ್ಲಿಯ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ, ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಸಾರಿಗೆ ನಿಗಮಗಳಲ್ಲಿ ನೀಡಲಾಗುವ ಅಪಘಾತ ಪರಿಹಾರ ವಿಮೆಯಂತೆ ಈ ಸಂಸ್ಥೆಯಲ್ಲಿಯೂ 1 ಕೋಟಿ ರೂ. ಅಪಘಾತ ಪರಿಹಾರ ವಿಮೆ ಹೆಚ್ಚಿಸಬೇಕಿದೆ. 9 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. 3800 ಬಸ್‌ಗಳು ಕೋವಿಡ್ ವೇಳೆ ಬಂದ್ ಆಗಿದ್ದವು. ಈಗ ಮರು ಆರಂಭಗೊಂಡಿವೆ. ಇದರಿಂದ ಶಕ್ತಿ ಯೋಜನೆಗೆ ಬಸ್‌ಗಳ ಕೊರತೆ ನೀಗಿದಂತಾಗಿದೆ. ಈ ಭಾಗದ ಜನರಿಗೆ ಹಳೆ ಬಸ್‌ಗಳನ್ನು ಕೊಡದೇ ಬ್ರ್ಯಾಂಡೆಡ್ ಹೊಸ ಬಸ್ ನೀಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, 13 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. 23 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣವನ್ನು ನವೀಕರಣಗೊಳಿಸಿ ಮೇಲ್ದರ್ಜೆಗೇರಿಸಲಾಗುವುದು. 884 ಹೊಸ ಬಸ್‌ಗಳು ಉತ್ತರ ಕರ್ನಾಟಕ ಭಾಗದ ಜನರಿಗೆ ದೊರೆಯಲಿವೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಫೆಬ್ರವರಿ ತಿಂಗಳ ನಂತರ ಹೊಸ ಬಸ್‌ಗಳು ಈ ಭಾಗದ ಜನರಿಗೆ ಸಿಗಲಿವೆ. ಅಲ್ಲದೇ 5 ಸಾವಿರ ಹೊಸ ಬಸ್‌ಗಳನ್ನು ಖರೀದಿಸುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್ಚಿನ ಬಸ್‌ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಸಂಸ್ಥೆಗೆ ವಿಶೇಷ ಅನುದಾನ ನೀಡಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ.ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಮೇಯರ್ ವೀಣಾ ಬರದ್ವಾಡ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಇತರರು ಇದ್ದರು.
ಪಲ್ಲಕ್ಕಿ ಲೋಕಾರ್ಪಣೆ:
ಐಷಾರಾಮಿ ವ್ಯವಸ್ಥೆಯ ಬಿಎಸ್-6 ನಾನ್ ಎಸಿ-ಸ್ಲೀಪರ್ 4 ಪಲ್ಲಕ್ಕಿ ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು. ಸಾರಿಗೆ ಸ್ಪಂದನ ತಂತ್ರಾಂಶಕ್ಕೆ ಚಾಲನೆ ನೀಡಲಾಯಿತು. ಅನುಕಂಪ ಆಧಾರದ 36 ಜನರಿಗೆ ನೇಮಕಾತಿ ಆದೇಶಪತ್ರ ವಿತರಿಸಲಾಯಿತು. ವೈಯಕ್ತಿಕ ಅಪಘಾತ ವಿಮಾ ಪರಿಹಾರ ವಿತರಿಸಲಾಯಿತು. ಅಪಘಾತರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ತರಬೇತಿ ನಿರತ ಕೆಸ್‌ಟಿ ಪೇದೆಗಳಿಗೆ ಪ್ರಶಸ್ತಿ ನೀಡಲಾಯಿತು.