ಕುಶಾಲನಗರ:
ಕುಶಾಲನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಅಕ್ಟೋಬರ್ 8ರ ಒಳಗೆ ಪೂರ್ಣಗೊಳಿಸುವಂತೆ ಯುಜಿಡಿ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಂಗಳವಾರ ನಡೆದ ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಒಳಚರಂಡಿ ಕಾಮಗಾರಿ 2014ರಲ್ಲಿ ಆರಂಭವಾದರೂ ಇನ್ನೂ ಪೂರ್ಣಗೊಳ್ಳದ ಬಗ್ಗೆ ಅಧಿಕಾರಿಗಳ ವಿರುದ್ಧ ಡಾ. ಮಂತರ್ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಯ ಪ್ರಗತಿ ಬಗ್ಗೆ ಯುಜಿಡಿ ಅಧಿಕಾರಿಗಳು ಮಾಹಿತಿ ನೀಡಲು ಮುಂದಾಗುತ್ತಿದ್ದAತೆಯೇ ಮಧ್ಯಪ್ರವೇಶಿಸಿದ ಮಂತರ್ ಗೌಡ, ಈಗ ಯುಜಿಡಿ ಕಾಮಗಾರಿಯ ಯಾವುದೇ ಚರ್ಚೆ ಬೇಡ. ಕೆಲಸ ಯಾವಾಗ ಮುಗಿಯುತ್ತದೆ? ಯಾವಾಗ ಯೋಜನೆ ಕಾರ್ಯಾರಂಭ ಮಾಡುತ್ತದೆ ಎನ್ನುವ ಮಾಹಿತಿ ಕೊಟ್ಟರೆ ಸಾಕು. 73 ಕೋಟಿ ರೂ. ಮೊತ್ತದ ಯೋಜನೆ ಹೀಗೆ ವಿಳಂಭ ಆಗುತ್ತಿದೆ ಎಂದರೆ ಏನು ಅರ್ಥ ? ಕಾಮಗಾರಿ ಪೂರ್ಣಗೊಳಿಸುವ ಬದ್ಧತೆಯೇ ಇಲಾಖೆಗೆ ಇಲ್ಲ. ಮಡಿಕೇರಿಯಲ್ಲೂ ಹೀಗೆಯೇ ಮಾಡಲಾಗುತ್ತಿದೆ. ಸರ್ಕಾರದ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ. ಈ ಮೊತ್ತವನ್ನು ಬೇರೆ ಯೋಜನೆಗಳಲ್ಲಿ ತೊಡಗಿಸಿದ್ದರೆ ಸಾರ್ವಜನಿಕರಿಗೆ ಉಪಯೋಗ ಆಗುತ್ತಿತ್ತು ಎಂದರು.
ನಿರ್ವಹಣಾ ವೆಚ್ಚ 48 ಲಕ್ಷ ರೂ. ನೀಡಿದರೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಯುಜಿಡಿ ಅಧಿಕಾರಿಗಳು ಹೇಳುತ್ತಿದ್ದಂತೆಯೇ ಮತ್ತೆ ಸಿಟ್ಟಾದ ಮಂತರ್ ಗೌಡ, ಯೋಜನೆ ಪೂರ್ಣಗೊಳ್ಳದೆ ನಿರ್ವಹಣಾ ವೆಚ್ಚ ಕೊಡುವುದು ಹೇಗೆ ? ಜನರನ್ನು ಮತ್ತು ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಮೊದಲು ಯೋಜನೆ ಪೂರ್ಣಗೊಳಿಸಿ. ನಂತರ ನಿರ್ವಹಣೆ ವಿಷಯ ಚರ್ಚೆ ಮಾಡಬಹುದು. ಯೋಜನೆ ಪ್ರಾಯೋಗಿಕವಾಗಿ ಕಾರ್ಯಾರಂಭ ಆಗಲಿ. ಸಮಸ್ಯೆಗಳಿದ್ದರೆ ಸರಿಪಡಿಸಲು ಸರ್ಕಾರದಿಂದ ಹೆಚ್ಚುವರಿ ಅನುದಾನ ಕೊಡಿಸಲಾಗುವುದು ಎಂದು ಹೇಳಿದರು.
ರಾಜಕಾಲುವೆಗಳ ಒತ್ತುವರಿ ಬಗ್ಗೆ ಸದಸ್ಯ ಖಲೀಮುಲ್ಲಾ ಸಭೆಯ ಗಮನಕ್ಕೆ ತಂದರು. ಕಾಲುವೆಗಳನ್ನು ಒತ್ತುವರಿ ಮಾಡಿ ಲೇಔಟ್‌ಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ. ಮಂತರ್ ಗೌಡ, ರಾಜಕಾಲುವೆಗಳ ಸರ್ವೆಗೆ ಸೂಚನೆ ನೀಡಿದರು. ಒತ್ತುವರಿ ಆಗಿದ್ದರೆ ತೆರವು ಮಾಡುವಂತೆ ಹೇಳಿದರು.
ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಗೆ ಕೂಡಲೇ ಕ್ರಮವಹಿಸಲು ಲೋಕೋಪಯೋಗಿ ಅಭಿಯಂತರರಿಗೆ ಸೂಚಿಸಿದರು. ಪೌರಕಾರ್ಮಿಕರಿಗೆ ನಿವೇಶನಗಳನ್ನು ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಕೆ, ಸ್ಮಶಾನಕ್ಕೆ ಜಾಗ ಗುರುತಿಸುವುದು, ಹಳೆ ಸೇತುವೆ ಸುಂದರೀಕರಣ, ನೂತನ ಪುರಸಭೆ ಕಟ್ಟಡ ಮಳೆಯಿಂದ ಸೀಪೇಜ್ ಬಾರದಂತೆ ಕ್ರಮವಹಿಸುವುದು, ಸಾರ್ವಜನಿಕ ಲೈಬ್ರರಿ ಗೆ ಜಾಗ ಒದಗಿಸುವ ಬಗ್ಗೆ ಚರ್ಚೆ ಸೇರಿದಂತೆ ಕೊಡಗು-ಮೈಸೂರು ಜಿಲ್ಲೆಯ ಗಡಿ ಆರಂಭದಲ್ಲಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ, ಪರಿಸರ ಪೂರಕ ಸೈನ್ ಬೋರ್ಡ್ ಗಳ ಅಳವಡಿಕೆಗೆ, ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಏಕಬಳಕೆ ಪ್ಲಾಸ್ಟಿಕ್ ನಿಷೇದದ ಬಗ್ಗೆ ಗಮಹರಿಸಲು ಶಾಸಕರು ಸೂಚಿಸಿದರು.
ಇದಕ್ಕೂ ಮೊದಲು ಅಧ್ಯಕ್ಷರ ಕಾರ್ಯವೈಖರಿಯನ್ನು ಡಿ.ಕೆ. ತಿಮ್ಮಪ್ಪ ಆಕ್ಷೇಪಿಸಿದರು. ಮೊದಲೆಲ್ಲಾ ಸಭೆ 10.30ಕ್ಕೆ ಆರಂಭಾಗುತ್ತಿತ್ತು. ಈಗ ಅದನ್ನು 11.30ಕ್ಕೆ ಮುಂದಕ್ಕೆ ಹಾಕಲಾಗಿದೆ. ಆದರೆ ಈದಿನದ ಸಭೆ 11.51ಕ್ಕೆ ಆರಂಭ ಆಗಿದೆ. ಹೀಗಾದರೆ ಅಜೆಂಡಾದಲ್ಲಿನ ವಿಷಯಗಳನ್ನು ಚರ್ಚಿಸುವುದು ಯಾವಾಗ ಎಂದು ಪ್ರಶ್ನಿಸಿದರು. ಅಧ್ಯಕ್ಷರ ಆಡಳಿತ ವೈಖರಿ ಸರಿ ಇಲ್ಲ. ಸದಸ್ಯರು ಕೇಳಿದ ಮಾಹಿತಿ ಕೊಡುತ್ತಿಲ್ಲ. ವಿರೋಧ ಪಕ್ಷ ಹೋಗಲಿ ಆಡಳಿತ ಪಕ್ಷಕ್ಕೂ ಇಲ್ಲಿ ಮಾಹಿತಿ ಸಿಗುತ್ತಿಲ್ಲ. ಅಧ್ಯಕ್ಷರು ತಮ್ಮ ಕಾರ್ಯಶೈಲಿ ಸರಿಪಡಿಸಿಕೊಳ್ಳಬೇಕು ಎಂದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರು, ಮುಂದಿನ ಸಲ ಸಭೆ 10.30ಕ್ಕೆ ಆರಂಭಿಸಲಾಗುವುದು ಎಂದರು.
ಮುಳ್ಳುಸೋಗೆ ಗ್ರಾ.ಪಂ. ಕುಶಾಲನಗರ ಪುರಸಭೆಗೆ ಸೇರ್ಪಡೆ ಆಗುವ ಸಂದರ್ಭದ ಕಡತಗಳು ನಾಪತ್ತೆ ಆಗಿದೆ ಎಂದು ಅಮೃತ್ ರಾಜ್ ಆರೋಪಿಸಿದರು. ಇದು ಗಂಭೀರ ವಿಷಯ. ಈ ಬಗ್ಗೆ ತನಿಖೆ ಆಗಬೇಕು ಎಂದರು. ಜೈವರ್ಧನ್ ಇದಕ್ಕೆ ಧ್ವನಿಗೂಡಿಸಿದರು. ಪ್ರಕಾಶ್ ಮಾತನಾಡಿ ಮುಳ್ಳುಸೋಗೆ ಪಂಚಾಯಿತಿಯ ನಡಾವಳಿ ಪುಸ್ತಕವೂ ಕಾಣುತ್ತಿಲ್ಲ ಎಂದರು. ಪುರಸಭೆ ವತಿಯಿಂದ ನಡೆಯುತ್ತಿರುವ ಕಾನೂನು ಹೋರಾಟದ ಬಗ್ಗೆ ಸದಸ್ಯರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಆನಂದ್‌ಕುಮಾರ್ ಆರೋಪಿಸಿದರು. ಈ ಸಂಬAಧ ಚರ್ಚೆಗೆ ವಿಶೇಷ ಸಭೆ ಕರೆಯುವಂತೆ ಪ್ರಮೋದ್ ಮುತ್ತಪ್ಪ ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಜಯಲಕ್ಷಿö್ಮÃ ಚಂದ್ರು, ಕೋರ್ಟ್ ಪ್ರಕರಣಗಳು, ಸಿನಿಮಾ ಮಂದಿರ, ಮುಳ್ಳುಸೋಗೆ ಪಂಚಾಯಿತಿ ದಾಖಲಾತಿ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಜುಲೈ 23ಕ್ಕೆ ಮುಂದಿನ ವಿಶೇಷ ಸಭೆ ನಡೆಸುವುದಾಗಿ ಹೇಳಿದರು.
ಉಪಾಧ್ಯಕ್ಷೆ ಪುಟ್ಟಲಕ್ಷಿö್ಮÃ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಸದಸ್ಯರು, ಮುಖ್ಯಾಧಿಕಾರಿ ಗಿರೀಶ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.