ಮಂಡ್ಯ: ನಾಟಕಗಳು ಮನುಷ್ಯನ ಮನಸ್ಸಿಗೆ ಮುದವನ್ನು ನೀಡುತ್ತವೆ ಎಂದು ಬಸವೇಶ್ವರ ಕಲಾ ಸಂಘದ ಅಧ್ಯಕ್ಷ ಸಂಪಹಳ್ಳಿ ಬಸವರಾಜು ಅಭಿಪ್ರಾಯಿಸಿದರು.
ಇಲ್ಲಿನ ಶಂಕರನಗರದ ವಿದ್ಯಾಗಣಪತಿ ಮತ್ತು ಉಮಾ ಮಹೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ಕಲಾಸಂಘದ ವತಿಯಿಂದ ಆಯೋಜಿಸಿದ್ದ ಪಾದುಕ ಪ್ರದಾನ ಮತ್ತು ಶ್ರೀರಾಮ ಪಟ್ಟಾಭಿಷೇಕ ಎಂಬ ಪೌರಾಣಿಕ ನಾಟಕದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಪೌರಾಣಿಕ ನಾಟಕ ಪ್ರದರ್ಶನದಿಂದ ಜನರ ಮನಸ್ಸನ್ನು ಕೇಂದ್ರಿಕರಿಸಬಹುದು. ಇಂದಿನ ಕಾಲಘಟ್ಟದಲ್ಲಿ ಅಣ್ಣ, ತಮ್ಮಂದಿರು ಒಂದಡಿ ಜಾಗಕ್ಕಾಗಿ ಸಂಬಂಧ ಮರೆತು ಜಗಳವಾಡುತ್ತಾರೆ. ಆದರೆ ರಾಮ, ಲಕ್ಷ್ಮಣ, ಸೀತೆಯ ತ್ಯಾಗ ಮನೋಭಾವವನ್ನು ನಾವೆಲ್ಲರೂ ಅರಿಯಬೇಕಿದೆ. ಈ ನಾಟಕದ ಉದ್ದೇಶವು ಎಲ್ಲ ಕುಟುಂಬಗಳು ಒಂದಾಗಿರಬೇಕೆನ್ನುವುದಾಗಿದೆ ಎಂದು ಹೇಳಿದರು.
ವಿದ್ಯಾಗಣಪತಿ ಮತ್ತು ಉಮಾಮಹೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಂ.ಎಚ್.ಶಿವಲಿಂಗೇಗೌಡ ಮಾತನಾಡಿ, ರಾಮಾಯಣದ ಒಂದು ಭಾಗವನ್ನು ನಾಟಕದ ಮೂಲಕ ನಿಮ್ಮ ಮುಂದೆ ಪ್ರದರ್ಶಿಸಲಾಗುತ್ತಿದೆ. ಒಂದೊಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಬಿಡುವಿನ ವೇಳೆಯಲ್ಲಿ ನಾಟಕ ಕಲಿತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಅಭಿನಂದನೀಯವಾಗಿದೆ ಎಂದರು,
ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಶೆಟ್ಟಿ, ಮುಖಂಡರಾದ ಕೃಷ್ಣಮೂರ್ತಿ, ಸಿದ್ದಪ್ಪ, ಶಿವರಾಜು, ಕಲಾವಿದರಾದ ಕಾಳೇನಹಳ್ಳಿ ಕೆಂಚೇಗೌಡ, ತಿಮ್ಮೇಗೌಡ, ಆತ್ಮಾನಂದ ಇತರರಿದ್ದರು.