ಜಿಲ್ಲೆ

ಬಸವನಗುಡಿಯ ಶ್ರೀ ಉತ್ತರಾದಿ ಮಠದ ಆವರಣದಲ್ಲಿ ಪುರಂದರದಾಸರ ಏಕಶಿಲಾ ಪ್ರತಿಮೆ ಅನಾವರಣ

malli

ಬೆಂಗಳೂರು:  ಭಕ್ತಿಯ ಮೂಲಕ ಮನುಕುಲಕ್ಕೆ ಸುಲಭವಾದ ಮಾರ್ಗದಲ್ಲಿ ದೇವರನ್ನು ತೋರಿಸಿದವರು ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು ಎಂದು ಶ್ರೀ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಬಣ್ಣಿಸಿದ್ದಾರೆ.

ಶ್ರೀನಿವಾಸ ಉತ್ಸವ ಬಳಗ ಬಸವನಗುಡಿಯ ಶ್ರೀ ಉತ್ತರಾದಿ ಮಠದ ಆವರಣದಲ್ಲಿ ಸ್ಥಾಪಿಸಿರುವ ಪುರಂದರದಾಸರ ಏಕ ಶಿಲಾ ಪ್ರತಿಮೆಯನ್ನು ಸೋಮವಾರ ಅನಾವರಣಗೊಳಿಸಿ ಆಶೀರ್ವಚನ ನೀಡಿದರು. ಆಡಂಬರ ಇಲ್ಲದೆ ಭಗವಂತನನ್ನು ಹೃದಯದಲ್ಲಿ ಸ್ಥಾಪಿಸಿಕೊಂಡು ಸನ್ಮಾನ ನಡೆಯುವ ದಾರಿಯನ್ನು ಪುರಂದರದಾಸರು ತೋರಿಸಿಕೊಟ್ಟಿದ್ದಾರೆ ಎಂದರು. ರಾಮಾಯಣ ಕಾಲದಲ್ಲಿ ಆಂಜನೇಯ ರಾವಣದ ಆಸ್ಥಾನಕ್ಕೆ ಹೋದಾಗ ನಾನು ರಾಮನ ದಾಸ ಎಂದು ಹೇಳುವ ಮೂಲಕ ಈ ಪರಂಪರೆ ಬಂದಿದೆ. ಅದೇ ಪರಂಪರೆಯಲ್ಲಿ ಶ್ರೀಮದ್ ಆನಂದತೀರ್ಥ ಭಗವತ್ಪಾದರ ಶಿಷ್ಯ ನರಹರಿ ತೀರ್ಥರು ದಾಸಸಾಹಿತ್ಯದ ಪ್ರವರ್ತಕರು. ನಂತರ, ಶ್ರೀಪಾದರ ರಾಜರ ಶಿಷ್ಯರಾದ ಶ್ರೀವಾಸರಾಜರು ಪುರಂದರದಾಸರ ಗುರುಗಳಾಗಿ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಇತಿಹಾಸದಲ್ಲಿ ಒಬ್ಬ ಗುರುಗಳು ತಮ್ಮ ಶಿಷ್ಯರ ಬಗ್ಗೆ ದಾಸರೆಂದರೆ ಪುರಂದರದಾಸರು ಎಂದು ಗುಣಗಾನ ಮಾಡಿದ್ದರು ಎಂದು ಶ್ರೀಗಳು ಹೇಳಿದರು.

26ರವರೆಗೆ ಪುರಂದರ ಸಪ್ತರಾತ್ರೋತ್ಸವ

ಪುರಂದರದಾಸರ ನೆನೆಯುವ ಸಾರ್ಥಕ ಪ್ರಯತ್ನದಿಂದಾಗಿ ಉತ್ತರಾದಿ ಮಠದ ಆವರಣದಲ್ಲಿ ಭಾನುವಾರದವರೆಗೆ (ಜ.26) ಪುರಂದರ ಸಪ್ತರಾತ್ರೋತ್ಸವ ನಡೆಯಲಿದೆ. ಪ್ರತಿ ನಿತ್ಯ ಉಪನ್ಯಾಸ, ಹರಿದಾಸ ವಾಣಿ, ಪುರಂದರ ವೈಭವ ನಾಮಸಂಕೀರ್ತನೆ, ಪುರಂದರದಾಸರ ಕೃತಿಗಳ ಗಾಯನ ಕಾರ್ಯಕ್ರಮಗಳು ಇರಲಿವೆ. ಕಳೆದ ಹಲವು ವರ್ಷಗಳಿಂದ ಕಲಿಯುಗ ಆರಾಧ್ಯ ದೈವ ತಿರುಮಲೆಯ ಶ್ರೀನಿವಾಸನ ಕಲ್ಯಾಣ ಮಹೋತ್ಸವವನ್ನು ವ್ಯಾಸ ದಾಸ ಸಾಹಿತ್ಯ ಹಾಗೂ ವೇದಮಂತ್ರ ಹರಿದಾಸ ವಾಣಿಯ ಸುಮಧುರ ಸಮ್ಮಿಲನದೊಂದಿಗೆ ಮನೆಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ವಾದಿರಾಜ್ ತಿಳಿಸಿದರು.

9 ಅಡಿ ಎತ್ತರದ ಪ್ರತಿಮೆಗೆ 15 ಲಕ್ಷ ರೂ. ವೆಚ್ಚ

ಶ್ರೀನಿವಾಸ ಉತ್ಸವ ಬಳಗ ಸಂಸ್ಥೆಯ ಅಧ್ಯಕ್ಷ ಟಿ. ವಾದಿರಾಜ್ ಮಾತನಾಡಿ, 15 ಲಕ್ಷ ರೂ. ವೆಚ್ಚದಲ್ಲಿ 9 ಅಡಿ ಎತ್ತರ ಪುರಂದರದಾಸರ ಏಕಶಿಲಾ ಪ್ರತಿಮೆ ಸ್ಥಾಪಿಸಲಾಗಿದೆ. ಈ ಮೂಲಕ ಹರಿದಾಸ ಸಾಹಿತ್ಯವನ್ನು ಮತ್ತಷ್ಟು ಪ್ರಚುರ ಪಡಿಸುವ ಉದ್ದೇಶವನ್ನು ಬಳಗ ಹೊಂದಿದೆ. ದಾಸ ಸಾಹಿತ್ಯದ ಕುರಿತು ಗ್ರಂಥ ಪ್ರಕಾಶನ, ವಿಚಾರ ಸಂಕಿರಣ, ಸಿಡಿ ನಿರ್ಮಾಣ ಮಾಡುತ್ತಾ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತ ದಾಸರ ಸಂದೇಶವನ್ನು ಮನೆ ಮನೆಗೆ ಸಾರುತ್ತಿದ್ದೇವೆ ಎಂದರು.