ಗಜೇಂದ್ರಗಡ: ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪಟ್ಟಣದ ಮೈಸೂರು ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಪುರಾಣ ಪ್ರಾರಂಭೋತ್ಸವದ ಪೂರ್ವಭಾವಿ ಸಭೆ ಮಂಗಳವಾರ ಜರುಗಿತು.
ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಪ್ರತಿವರ್ಷ ಜರುಗುವ ಪುರಾಣ ಕಾರ್ಯಕ್ರಮಕ್ಕೆ ಸಮಾಜ ಭಾಂಧವರು ಶ್ರದ್ಧಾ ಭಾವನೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ಪುರಾಣ ಯಶಸ್ವಿಯಾಗಲು ಸಾಧ್ಯ. ಈ ವರ್ಷ ಶ್ರೀ ಮಹಾದಾಸೋಹ ಮೂರ್ತಿ ಬರಗಾಲದಬಂಟ ಕಲಬುರ್ಗಿ ಶಿವಶರಣ ಶ್ರೀ ಶರಣಬಸವೇಶ್ವರ ಪುರಾಣ ಪ್ರಾರಂಭೊತ್ಸವವನ್ನು ಪಟ್ಟಣದ ಮೈಸೂರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವವರು. ಪ್ರವಚನಕಾರರಾದ ಬ್ಯಾಡಗಿ ತಾಲೂಕಿನ ಕಲ್ಲಿದೇವರ ಗ್ರಾಮದ ಕುಮಾರ ಶಾಸ್ತ್ರಿಗಳು ಹಿರೇಮಠ ಪ್ರವಚನ ನೀಡುವವರು. ಪುರಾಣ ಅ.17 ರಿಂದ ಪ್ರಾರಂಭವಾಗಿ ಶ್ರಾವಣ ಮಾಸದ ಅಂತ್ಯದವರೆಗೂ ಸಂಜೆ 7 ಗಂಟೆಗೆ ಜರುಗಲಿದೆ ಹಾಗೂ ಅನ್ನದಾಸೋಹ ಇರುತ್ತದೆ ಎಂದರು.
ಪುರಾಣ ಸಮಿತಿ ಅಧ್ಯಕ್ಷ ಶಿವಕುಮಾರ ಕೋರಧಾನ್ಯಮಠ, ಪ್ರಭು ಚವಡಿ, ಎಸ್.ಎಸ್. ವಾಲಿ, ಎ.ಪಿ. ಗಾಣಿಗೇರ, ಕಲ್ಲಪ್ಪ ಸಜ್ಜನರ, ಬಸವರಾಜ ಬೇಲೇರಿ, ಬಸವರಾಜ ಕೊಟಗಿ,ಅಪ್ಪು ಮತ್ತಿಕಟ್ಟಿ, ಅಮರಯ್ಯ ಗೌರಿಮಠ, ಕಳಕಯ್ಯ ಸಾಲಿಮಠ, ಬಸವರಾಜ ರೇವಡಿ, ರಾಕೇಶ ಮಾರನಬಸರಿ, ವಿರೇಶ ಸಂಗಮದ, ಮಲ್ಲಪ್ಪ ಲಕ್ಕಲಕಟ್ಟಿ ಇತರರು ಇದ್ದರು.