ಜಿಲ್ಲೆ

ವಿದ್ಯಾರ್ಥಿಗಳ ಗೋಳು ಕೇಳೋರ್ ಯಾರು?

ಎನ್.ವೆಂಕಟೇಶ್

ಸಮಯಕ್ಕೆ ಸರಿಯಾಗಿ ಸಂಚರಿಸದ ಬಸ್ ಮಂಚೇನಹಳ್ಳಿಯಲ್ಲಿ ಪ್ರತಿಭಟನೆ

ಮಂಚೇನಹಳ್ಳಿ: ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಒಂದು ವೇಳೆ ಬಂದರೂ ಗೌರಿಬಿದನೂರಿನಲ್ಲೇ ಭರ್ತಿಯಾಗಿರುತ್ತದೆ. ಹೀಗಾದರೆ ಶಾಲಾ ಕಾಲೇಜುಗಳಿಗೆ ಹೋಗುವುದು ಹೇಗೆ ಎಂದು ಮಂಚೇನಹಳ್ಳಿಯಲ್ಲಿ ವಿದ್ಯಾರ್ಥಿಗಳು

ಬುಧವಾರ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ವಿನಯ್ ಮಾತನಾಡಿ, ಬಸ್‌ಗಳು ಸಮಯಕ್ಕೆ ಬರುತ್ತಿಲ್ಲ. ಹಾಗಾಗಿ ಕಲಿಕೆಗೆ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಹಾಗಾಗಿ ನಮ್ಮ ಸಮಸ್ಯೆಗಳತ್ತ

ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಬೆಳಗ್ಗೆ 7 ಗಂಟೆಯಿಂದ ಕಾಯುತಿದ್ದೇವೆ ಒಂದು ಬಸ್ಸು ಇಲ್ಲ. ಪ್ರತಿಭಟನೆ ವಿಷಯ ತಿಳಿದು ಬಸ್ ಕಳಿಸಿದ್ದಾರೆ. 9 ಗಂಟೆಗೆ ಇರುವ ಕಾಲೇಜಿಗೆ ಪ್ರತಿದಿನ ತಡವಾಗಿ ಹೋದರೆ ಶಿಕ್ಷಕರು ಬೈತಾರೆ ಎಂದು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು. ಇನ್ನು ಆಗಾಗ ಬರುವ ಬಸ್‌ನಲ್ಲಿ ಗೌರಿಬಿದನೂರಿನಲ್ಲೇ ಜನ ಭರ್ತಿಯಾಗಿರುತ್ತಾರೆ. ಈ ಬಸ್‌ಗಳ ಬಾಗಿಲ್ಲೇ ನೇತಾಡಿಕೊಂಡು ಹೋಗಬೇಕು. ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

ಇನ್ನು ಮಾರ್ಗಮಧ್ಯೆ ಕಣಿವೆ ದಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಕೆಲ ಬಸ್‌ಗಳು ನಿಂತುಹೋಗುತ್ತವೆ. ಆಗ ಅಲ್ಲಿ ಇಳಿದು ಕಾರು, ಬೈಕ್ ಅಥವಾ ಇತರ ವಾಹನಗಳನ್ನು ಕೈಚಾಚಿ ನಿಲ್ಲಿಸಿ ಹೋಗಬೇಕಾಗಿದೆ. ಇನ್ನಾದರೂ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಿಎಸ್‌ಐ ಮೂರ್ತಿ ವಿದ್ಯಾರ್ಥಿಗಳ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಸಮರ್ಪಕ ಸೇವೆಯ ಭರವಸೆ

ಸಂಚಾರ ನಿಯಂತ್ರಕ ನಾಗೇಂದ್ರ ಕುಮಾರ್ ಮಾತನಾಡಿ, ಸಿಬ್ಬಂದಿ ಕೊರತೆ ಇರುವುದರಿಂದ ಈ ರೀತಿ ತೊಂದರೆ ಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮೇಲಿನ ಅಧಿಕಾರಿಗಳ ಜತೆ ಚರ್ಚಿಸಿ ಸಮರ್ಪಕ ಬಸ್ ಸೇವೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.