ಹೊಸಪೇಟೆಯಲ್ಲಿರುವ ಪುನೀತ್ ರಾಜ್‌ಕುಮಾರ ಪುತ್ಥಳಿ ಎದುರು ಅಪ್ಪು ಅಭಿಮಾನಿಗಳಾದ ಕಿಚಿಡಿ ವಿಶ್ವ, ಜೋಗಿ ತಾಯಪ್ಪ, ಉಮೇಶ್ ಸೇರಿದಂತೆ 9 ಜನರು ಬುಧವಾರ ‘ಅಪ್ಪು ದೇವರ ಮಾಲೆ’ ಧರಿಸಿದರು. 
ಜಿಲ್ಲೆ

ಅಭಿಮಾನಿಗಳಿಂದ ‘ಅಪ್ಪು’ ಮಾಲಾಧಾರಣೆ

ಹೊಸಪೇಟೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿಮಾನಿಗಳು ನಗರದಲ್ಲಿ ಬುಧವಾರ ಅಪ್ಪು ದೇವರ ಮಾಲೆ ಧರಿಸಿ, ಇಲ್ಲಿನ ಪುನೀತ್ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ 9 ದಿನಗಳ ವ್ರತಾಚರಣೆ ಕೈಗೊಂಡರು.

ಇಲ್ಲಿನ ಪುನೀತ್ ರಾಜ್‌ಕುಮಾರ್ ಸರ್ಕಲ್‌ನಲ್ಲಿರುವ ಅಪ್ಪು ಪುತ್ತಳಿ ಎದುರು ಕೇಸರಿ ವಸ್ತ್ರ ಧರಿಸಿದ್ದ ವ್ರತಾಕಾಂಕ್ಷಿಗಳ ಕೊರಳಿಗೆ ಅಪ್ಪು ಡಾಲರ್, ಏಲಕ್ಕಿ ಸರ ಹಾಕಿದ ಸಿದ್ದಲಿಂಗಯ್ಯ ಸ್ವಾಮಿ ಅವರು, ಅಪ್ಪು ದೇವರ ಮಾಲೆಯ ದೀಕ್ಷೆ ಕರುಣಿಸಿದರು. ಬಳಿ ವ್ರತಾಚರಣೆಯ ಮಹತ್ವ ಮತ್ತು ಪುನೀತ್ ರಾಜ್‌ಕುಮಾರ್ ಆದರ್ಶಗಳನ್ನು ಮೆಲುಕು ಹಾಕಿದರು.

ವ್ರತಾಚರಣೆ ವೇಳೆ ಸೂರ್ಯೋದಯಕ್ಕೂ ಮುನ್ನವೇ ನಿತ್ಯ ಕರ್ಮಗಳನ್ನು ಮುಗಿಸಿ, ಬೆಳಗ್ಗೆ ಮತ್ತು ಸಂಜೆ ದಿನಕ್ಕೆ ಎರಡು ಬಾರಿ ಪುನೀತ್ ರಾಜ್‌ಕುಮಾರ ಭಾವಚಿತ್ರದ ಮುಂದೆ ಅಪ್ಪು ದೇವರ ಡಾಲರ್ ಇರಿಸಿ ಪೂಜೆ ಸಲ್ಲಿಸಬೇಕು. 9 ದಿನಗಳ ಕಾಲ ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ಧರಿಸಿರಬೇಕು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಉಪಾಹಾರ ಸೇವಿಸಬೇಕು ಎಂದು ವ್ರತಾಚರಣೆಯ ನಿಯಮಗಳನ್ನು ವಿವರಿಸಿದರು. ಅಪ್ಪು ಅಭಿಮಾನಿಗಳಾದ ಕಿಚಿಡಿ ವಿಶ್ವ, ಜೋಗಿ ತಾಯಪ್ಪ, ಉಮೇಶ ಸೇರಿದಂತೆ 9 ಜನರು ಅಪ್ಪು ದೇವರ ಮಾಲೆ ಧರಿಸಿದ್ದು, ಮಾ.18 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಅಪ್ಪು ಅಭಿಮಾನಿಗಳು ಅಪ್ಪು ದೇವರ ಮಾಲಾಧಾರಣೆ ಮಾಡಿದ್ದಾರೆ.