ಜಿಲ್ಲೆ

ಅನಾಹುತ ಸಂಭವಿಸಿದರೆ ವಾರಸುದಾರರಿಗೆ ಶಿಕ್ಷೆ

ಅರಕಲಗೂಡು: ಹದಿ ಹರೆಯದ ವಯಸ್ಸಿನಲ್ಲಿ ಮನಸ್ಸೋ ಇಚ್ಛೆ ಮೋಟಾರ್ ಬೈಕ್‌ಗಳನ್ನು ಓಡಿಸುವುದು ಮತ್ತು ಉಪಯೋಗಿಸುವುದು ಕಾನೂನು ಬಾಹಿರ. ಇದರಿಂದ ಅನಾಹುತಗಳು ಸಂಭವಿಸಿದರೆ ದಾಖಲಾತಿ ಹೊಂದಿರುವ ವಾರಸುದಾರರಿಗೆ ಕಾನೂನಿನ ಅನ್ವಯ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ಆರಕ್ಷಕ ಉಪನಿರೀಕ್ಷಕಿ ಕಾವ್ಯಾ ಹೇಳಿದರು.

ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಕಾನೂನು ಅರಿವು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರವಾನಗಿ ಇಲ್ಲದೆ ಬೈಕ್ ಓಡಿಸುವುದು ಕಾನೂನು ಬಾಹಿರವಾಗಿದ್ದು, ಅನಾಹುತಗಳು ಸಂಭವಿಸಿದರೆ ಕಾನೂನಿನ ಅನ್ವಯ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಮೋಟಾರ್ ಬೈಕ್‌ಗಳನ್ನು 18 ವರ್ಷದ ನಂತರ ದಾಖಲಾತಿಯೊಂದಿಗೆ ಉಪಯೋಗಿಸುವುದು ಸೂಕ್ತ ಎಂದು ಅರಿವು ಮೂಡಿಸಿದರು.

ಬೈಕ್‌ಗಳನ್ನು ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರುಗಳಲ್ಲಿ ಸೀಟ್ ಬೆಲ್ಟ್‌ಗಳನ್ನು ಬಳಸಿ ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಇದರಿಂದ ವ್ಯಕ್ತಿಯ ಜೀವ ಮತ್ತು ಜೀವನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರಿಂದ ಇದರ ಬಗ್ಗೆ ಪಾಲಕರು ಹಾಗೂ ನೆರೆಯವರಿಗೆ ತಿಳಿವಳಿಕೆ ಮೂಡಿಸುವುದು ಮುಖ್ಯ ಎಂದರು.

ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮುಂಚಿತವಾಗಿ ಪ್ರೀತಿ, ಪ್ರೇಮ ಮದುವೆಗಳಲ್ಲಿ ತೊಡಗಿದ್ದು, ಇತ್ತೀಚೆಗೆ ಪೋಕ್ಸೋ ಕಾಯ್ದೆಗಳು ಹೆಚ್ಚಾಗಲು ಕಾರಣವಾಗಿದೆ. ವಿದ್ಯಾರ್ಥಿನಿಯರು ಓದಿನ ಕಡೆಗೆ ಗಮನ ಕೊಟ್ಟು ತಮ್ಮ ಗುರಿಯನ್ನು ಸಾಧಿಸಿ ತಂದೆ, ತಾಯಿಯರಿಗೆ ಒಳ್ಳೆಯ ಮಕ್ಕಳಾಗಿ ಉತ್ತಮ ಭವಿಷ್ಯದ ಕಡೆಗೆ ಗಮನ ಹರಿಸಬೇಕು. ಸಾಮಾಜಿಕ ಜಾಲತಾಣಗಳಿಂದ ದುರುಪಯೋಗಗಳೇ ಹೆಚ್ಚಿದ್ದು, ಸೈಬರ್ ಕ್ರೈಂಗಳು ಹೆಚ್ಚಾಗಿದೆ ಎಂದರು.

ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾನೂನಿನ ಅರಿವು ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿ ಬೇಕಾಗಿದ್ದು ಸಾರ್ವಜನಿಕರು ಕಾನೂನು ಪಾಲನೆ ಮೂಡುವುದರ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕಾಗಿರುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು. ಉಪನ್ಯಾಸಕರು, ಆರಕ್ಷಕ ಸಿಬ್ಬಂದಿ ಇದ್ದರು.