ಬಾದಾಮಿ: ಭಾರತ ದೇಶವು ಪಾಕಿಸ್ತಾನದ ಮೇಲೆ ಕೈಗೊಂಡಿದ್ದ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಂತರ ದೇಶದ ಯೋಧರಿಗೆ ಗೌರವಾರ್ಥವಾಗಿ ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ತಿರಂಗ ಯಾತ್ರೆ ಅದ್ದೂರಿಯಾಗಿ ಜರುಗಿತು.
ಯಾತ್ರೆ ವೇಳೆ ದೇಶಾಭಿಮಾನಿಗಳ ಜಯಘೋಷಗಳು ಮುಗಿಲು ಮುಟ್ಟುವಂತಿದ್ದವು. ಬೆಳಗ್ಗೆ ನಗರದ ಶಿವಯೋಗ ಮಂದಿರ ಶಾಖಾ ಮಠದಿಂದ ಆರಂಭಗೊಂಡ ಭಾರತ ಮಾತೆಯ ತಿರಂಗ ಯಾತ್ರೆಯು ಪ್ರಮುಖ ಬೀದಿಯಲ್ಲಿ ಸಂಚರಿಸಿ ಕಬ್ಬಲಗೇರಿಗೆ ತೆರಳುವ ಬಸವೇಶ್ವರ ವೃತ್ತದವರೆಗೆ ಸಾಗಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು.
ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ, ಗುಡಿಯಲ್ಲಿರುವ ದೇವರಿಗಿಂತ ಗಡಿಯಲ್ಲಿರುವ ದೇವರು ದೊಡ್ಡದು. ನಮ್ಮ ದೇಶದ ಮಹಿಳೆಯರ ಸಿಂಧೂರ ಅಳುಕಿಸಲು ಪ್ರಯತ್ನಿಸಿದ್ದ ಪಾಕಿಸ್ತಾನಕ್ಕೆ ನಮ್ಮ ಯೋಧರು ಆಪರೇಷನ್ ಸಿಂಧೂರ ಹೆಸರಿನಲ್ಲಿ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ನಮ್ಮ ದೇಶದಲ್ಲಿ ಶಾಂತಿ ಸೌಹಾರ್ದತೆಯಿಂದ ಬದುಕು ನಡೆಸುತ್ತಿರುವುದನ್ನು ಸಹಿಸದ ಪಾಪಿಸ್ತಾನ ಆಗಾಗ ಉಗ್ರರ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ನಮ್ಮ ಯೋಧರು ಸೂಕ್ತ ದಾಳಿ ನಡೆಸಿ ಗಡಿಯಲ್ಲಿ ಮತ್ತು ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ತಾಣಗಳನ್ನು ನಾಶ ಮಾಡಿ ಭಾರತದ ಪರಾಕ್ರಮ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಉಗ್ರವಾದ ಹುಟ್ಟು ಹಾಕುತ್ತಿರುವ ಪಾಕಿಸ್ತಾನದ ಸೊಕ್ಕಡಗಿಸಿರುವ ನಮ್ಮ ಸೇನೆ ಬೆಂಬಲಿಸುವ ನಿಟ್ಟಿನಲ್ಲಿ ತಿರಂಗಾ ಯಾತ್ರೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುರುಡಿ ಮಠದ ಶ್ರೀ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ನವಗ್ರಹ ಹಿರೇಮಠದ ಶ್ರೀ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ ಕಾಚಟ್ಟಿ ಮಾತನಾಡಿದರು.
ನಂತರ ನಿವೃತ್ತ ಯೋಧರು ಧ್ವನಿವರ್ಧಕದ ಮೂಲಕ ದೇಶಾಭಿಮಾನದ ಘೋಷಣೆ ಕೂಗಿದರು. ಬಾವುಟಗಳನ್ನು ಹಿಡಿದುಕೊಂಡಿದ್ದ ಯಾತ್ರಿಗಳು ಯಾತ್ರೆಯುದ್ದಕ್ಕೂ ಜಯಘೋಷಗಳನ್ನು ಮೊಳಗಿಸಿದರು.
ನಿವೃತ್ತ ಯೋಧರ ಸಂಘದ ಅಧ್ಯಕ್ಷ ಎಚ್.ಎ. ಕೇಸರಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶಹಾಜಿ ಪವಾರ, ರವಿ ಪೂಜಾರಿ, ವರ್ತಕರ ಸಂಘದ ಅಧ್ಯಕ್ಷ ಪಿ. ವೀರಣ್ಣ, ಡಾ. ದಾನಪ್ಪಗೌಡರ, ಪ್ರದೀಪ ಬೇವೂರ, ಬೇಲೂರಪ್ಪ ವಡ್ಡರ ಇದ್ದರು.