ಅಮೀನಗಡ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಗುಳೇದಗುಡ್ಡ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಪುರಗಿರಿಯ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಮಠದ ಪ್ರಶಾಂತ ದೇವರು, ವಿಜಯಪುರದ ಚರಮೂರ್ತಿ ದೇವರು ಇದ್ದರು. 
ಜಿಲ್ಲೆ

ದುಷ್ಕರ್ಮಿಗೆ ಕೂಡಲೇ ಶಿಕ್ಷೆ ವಿಧಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಅಮೀನಗಡ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಹಾಗೂ ಗುಳೇದಗುಡ್ಡ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.

ಅಮೀನಗಡ ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಯುವಕರಲ್ಲಿ ಆಧ್ಯಾತ್ಮಿಕ ಒಲವು ಕಡಿಮೆ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಕಲಿಯುವಂತಹ ವಯಸ್ಸಿನಲ್ಲಿ ಹತ್ಯೆ ಮಾಡುವಂತಹ ದುಷ್ಕೃತ್ಯಕ್ಕೆ ಇಳಿದಿರುವುದನ್ನು ನೋಡಿದರೆ ಅವರಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣಿಸುತ್ತಿದೆ ಎಂದರು.

ಶಿಕ್ಷಣ ಸಂಸ್ಥೆಗಳೆಂದರೆ ದೇವಾಲಯ ಇದ್ದ ಹಾಗೆ. ಅಂಥ ಶಿಕ್ಷಣ ಸಂಸ್ಥೆಗಳಲ್ಲಿ ಹತ್ಯೆ ಮಾಡುವಂತಹ ಘಟನೆ ನಡೆಯುತ್ತಿರುವುದು ಸರಿಯಲ್ಲ. ಹತ್ಯೆ ಘಟನೆಯಿಂದ ಎಲ್ಲರ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊಲೆಗಾರನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪುರಗಿರಿಯ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಮಠದ ಪ್ರಶಾಂತ ದೇವರು, ವಿಜಯಪುರದ ಚರಮೂರ್ತಿ ದೇವರು ಇದ್ದರು.