ವಿಜಯಪುರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಚಿತ್ರನಟ ಉಪೇಂದ್ರರನ್ನು ಶಿಕ್ಷೆಗೊಳಪಡಿಸಿ

ಗಿರೀಶ ಸಗರ

ವಿಜಯಪುರ: ದಲಿತರ ಬಗ್ಗೆ ನಟ ಉಪೇಂದ್ರ ನೀಡಿರುವ ಅವಹೇಳನಕಾರಿ ಹೇಳಿಕೆ ಹಾಗೂ ಮಹಿಳೆಯರು, ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ ಆರಂಭಗೊಂಡ ಮೆರಣಿಗೆ ಮಹಾತ್ಮ ಬಸವೇಶ್ವರ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿ ತಲುಪಿತು.

ಮಾರ್ಗದುದ್ದಕ್ಕೂ ನಟ ಉಪೇಂದ್ರನ ವಿರುದ್ಧ ಘೋಷಣೆ ಕೂಗಿದ ನೀಲಿ ಶಾಲುದಾರಿಗಳು ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸಂಚಾಲಕ ಹೆಣ್ಣೂರ ಶ್ರೀನಿವಾಸ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಸಿಕ್ಕು 76 ವರ್ಷ ಗತಿಸಿದರೂ ಈವರೆಗೆ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ.

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಲೇ ಇವೆ.

ಮಣಿಪುರದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ಇಡೀ ಮಾನವ ಸಮಾಜವೇ ನಾಚಿ ತಲೆ ತಗ್ಗಿಸುವಂಥದ್ದಾಗಿದೆ ಎಂದರು.

ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಮತ್ತು ರಾಜ್ಯ ಸಂಚಾಲಕ ರಮೇಶ ಆಸಂಗಿ ಮಾತನಾಡಿ, ಸೌಜನ್ಯ ಹತ್ಯೆ ನಡೆದು 11 ವರ್ಷ ಆದರೂ ನ್ಯಾಯ ಸಿಕ್ಕಿಲ್ಲ, ಆಕೆಯ ಹತ್ಯೆಯ ನೈಜ ಆರೋಪಿ ಬಂಧನ ಆಗಬೇಕು. ಸಿಬಿಐ ಕೋರ್ಟ್ ತೀರ್ಪಿನಲ್ಲಿ ನೈಜ ಆರೋಪಿಗೆ ಶಿಕ್ಷೆ ಆಗಿಲ್ಲ.

ಹೀಗಾಗಿ ರಾಜ್ಯ ಸರ್ಕಾರ ಮರು ತನಿಖೆಗೆ ಒಳಪಡಿಸಬೇಕೆಂದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿಯಲ್ಲಿ ಕಳೆದ ಜು. 29ರಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಹೊರಗುತ್ತಿಗೆ ನೌಕರಳು ಹಾಗೂ ದಲಿತ ಮಹಿಳೆ ಭೀಮಾಬಾಯಿ ಸಂಗಪ್ಪ ಚಲವಾದಿ ಇವಳನ್ನು ಅತ್ಯಾಚಾರ ವೆಸಗಿ ಕೊಲೆ ಮಾಡಿರುವುದು ದುರ್ದೈವ ಸಂಗತಿ.

ಅತ್ಯಾಚಾರ ಮಾಡಿ ಕೊಲೆಗೈದವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಆ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಿಸಬೇಕೆಂದರು.

ರಾಜ್ಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಶರಣು ಸಿಂಧೆ, ಡಾ. ಮಲ್ಲೇಶಿ ಸಜ್ಜನ, ಮರೀಶ ನಾಗಣ್ಣವರ, ವಿನಾಯಕ ಗುಣಸಾಗರ, ಶರಣು ಶಿಂಧೆ, ಲಕ್ಕಪ್ಪ ಬಡಿಗೇರ, ತಮ್ಮಣ್ಣ ಖಾನಾಗಡ್ಡಿ, ವೈ.ಸಿ. ಮ್ಯಾಗೇರಿ, ಬಿ.ಎಸ್. ತಳವಾರ, ಯಶೋದಾ ಮೇಲಿನಕೇರಿ, ರವಿ ಮ್ಯಾಗೇರಿ, ಹನಮಂತ ಆಲಮೇಲ, ಮಂಜುನಾಥ ಯಂಟಮನ, ರಾಜಕುಮಾರ ಸಿಂದಗೇರಿ, ರವಿಚಂದ್ರ ಚಲವಾದಿ, ಲಕ್ಷ್ಮಣ ಹಾಲಿಯಾಳ, ಚಂದ್ರಶೇಖರ ಕೆಳಗಿನಮನಿ, ಸಂತೋಷ ಟಕ್ಕೆ, ಸಿದ್ದು ಬಾರಿಗಿಡದ, ಬಸವರಾಜ ತಳಕೇರಿ, ರೋಹಿತ ರೂಗಿ, ಶಿವಕುಮಾರ ಗುಡಿಮನಿ, ಆಕಾಶ ನಾಗಾವಿ, ಅಶೋಕ ಕರಾಬಿ, ರೇಣುಕಾ ಮಾದರ, ಶಿವಲೀಲಾ ಚಲವಾದಿ ಮತ್ತಿತರರಿದ್ದರು.