ವಿಜಯಪುರದಲ್ಲಿ ಗಜಾನನ ಮಹಾಮಂಡಳ ಪ್ರತಿಷ್ಠಾಪಿಸಿದ ಗಣೇಶನ ಉತ್ಸವ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಪುಣೆಯ ಡೋಲಿನ ವಾದ್ಯ ಗಮನ ಸೆಳೆಯಿತು.  
ಜಿಲ್ಲೆ

ಗುಮ್ಮಟನಗರಿಯಲ್ಲಿ ಪುಣೆಯ ಡೋಲಿನ ಸದ್ದು: ಗಣೇಶನ ಉತ್ಸವ ಮೂರ್ತಿಯ 9ನೇ ದಿನದ ವಿಸರ್ಜನಾ ಮೆರವಣಿಗೆ

ವಿಜಯಪುರ : ಪುಣೆಯ ಡೋಲಿನ ಭರ್ಜರಿ ಸದ್ದು, ಕರಡಿ ಮಜಲು, ವಿವಿಧ ಕಲಾ ತಂಡಗಳ ವೈಭವ, ಮೆರವಣಿಗೆಯ ಕಳೆ ಹೆಚ್ಚಿಸಿದ ಗಜರಾಜ. ಸಾವಿರಾರು ಭಕ್ತಾದಿಗಳ ಉದ್ಘೋಷ.

ಹೌದು .. ವಿಜಯಪುರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಉತ್ಸವ ಮೂರ್ತಿಯ 9ನೇ ದಿನದ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಗುರುವಾರ ಕಂಡು ಬಂದ ವೈಭವದ ದೃಶ್ಯಗಳಿವು.

ಪ್ರತಿವರ್ಷವೂ ವೈಭವದಿಂದ ಗಣೇಶೊತ್ಸವ ಹಾಗೂ ವಿಸರ್ಜನಾ ಪೂರ್ವ ಮೆರವಣಿಗೆ ಸಂಘಟಿಸುತ್ತಾ ಬಂದಿರುವ ಗಜಾನನ ಮಹಾಮಂಡಳ ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಮೆರವಣಿಗೆ ಆಯೋಜಿಸಿರಲಿಲ್ಲ. ಈ ಬಾರಿ ಅರ್ಥಪೂರ್ಣ ಹಾಗೂ ವೈಭವಯುತವಾಗಿ ಮೆರವಣಿಗೆ ಗಮನ ಸೆಳೆಯಿತು. ಈ ವೈಭವಯುತ ಮೆರವಣಿಗೆಗೆ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು.

ಪುಣೆಯ 250ಕ್ಕೂ ಹೆಚ್ಚು ಕಲಾವಿದರಿಂದ ಮೊಳಗಿದ ಆಕರ್ಷಕ ಡೋಲಿನ ನಿನಾದ ಮುಗಿಲು ಮುಟ್ಟಿತ್ತು. ಈ ಸದ್ದಿಗೆ ಸ್ಪರ್ಧೆ ಎಂಬಂತೆ ಭಕ್ತಾದಿಗಳ ಉದ್ಘೋಷ ಸಹ ಮುಗಿಲು ಮುಟ್ಟಿತ್ತು. ಸಾವಿರಾರು ಯುವಕರು ಭಕ್ತಿಭಾವದಿಂದ ‘ಗಣಪತಿ ಬಪ್ಪಾ ಮೋರಯ್ಯ….’, ‘ಗಜಾನನ ಮಹಾರಾಜ ಕೀ ಜೈ…’, ‘ಏಕ್ ದೋ ತೀನ್ ಚಾರ್ - ಗಣಪತಿ ಕೀ ಜೈ ಜೈಕಾರ್…’ ಎಂಬ ಹಲವಾರು ಭಕ್ತಿಭರಿತ ಘೋಷಣೆಗಳನ್ನು ಕೂಗಿದರು.

ವಿಜಯಪುರದ ಶಿವಾಜಿ ವೃತ್ತದಿಂದ ಆರಂಭಗೊಂಡ ವಿಸರ್ಜನಾ ಪೂರ್ವ ಮೆರವಣಿಗೆ ಗಾಂಧಿವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಗಿ ಹುತಾತ್ಮ ವೃತ್ತದ ಮುಖಾಂತರ ತಾಜ್ ಬಾವಡಿಗೆ ತಲುಪಿ ಸಂಪನ್ನಗೊಂಡಿತು.