ಶಿಡ್ಲಘಟ್ಟ : ನೇಪಾಳದ ಕಾಠ್ಮಂಡು ನಗರದ ಕ್ರೀಡಾಂಗಣದಲ್ಲಿ ಕಳೆದ ಮೇ 20ರಿಂದ 24ರವರೆಗೆ ನಡೆದ ದಕ್ಷಿಣ ಏಷ್ಯಾ ಅಂತಾರಾಷ್ಟ್ರೀಯ ಲಾನ್‌ಟೆನ್ನಿಸ್ ಪಂದ್ಯಾವಳಿಯಲ್ಲಿ (12 ವರ್ಷದೊಳಗಿನ) ಶಿಡ್ಲಘಟ್ಟ ತಾಲೂಕು ಮೇಲೂರು ಗ್ರಾಮದ ಎಂ.ಪುನೀತ್ ಮನೋಹರ್ ಗೆದ್ದು ಕಝಕಿಸ್ತಾನ್‌ನಲ್ಲಿ ನಡೆಯುವ ಏಷ್ಯಾ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ.
ಭಾರತ, ನೇಪಾಳ, ಭೂತಾನ್, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಭಾರತದ 3 ಬಾಲಕರು, 3 ಬಾಲಕಿಯರ ತಂಡದಲ್ಲಿ ಶಿಡ್ಲಘಟ್ಟ ತಾಲೂಕಿನ ಮೇಲೂರು ವಾಸಿ ವೈದ್ಯ ಡಾ.ಮನೋಹರ್, ನಮ್ರತಾ ದಂಪತಿ ಪುತ್ರ ಎಂ.ಪುನೀತ್ ಕೂಡ ಒಬ್ಬನಾಗಿದ್ದಾನೆ.
ಮೊದಲ ದಿನ ಮಾಲ್ಡೀವ್ಸ್ ತಂಡದ ವಿರುದ್ಧ ನಡೆದ ಸಿಂಗಲ್ಸ್ ಪಂದ್ಯದಲ್ಲಿ 6-0, 6-0 ಮತ್ತು ಡಬಲ್ಸ್‌ನಲ್ಲಿ 6-0, 6-0 ಗೇಮ್‌ಗಳ ಗೆಲುವು ಸಾಧಿಸಿದ ಪುನೀತ್, ಎರಡನೇ ದಿನ ಸಿಂಗಲ್ಸ್ ಪಂದ್ಯದಲ್ಲಿ ಬಾಂಗ್ಲಾ ತಂಡದ ವಿರುದ್ದ 6-0, 6-0 ಹಾಗೂ ಡಬಲ್ಸ್‌ನಲ್ಲಿ 6-1, 6-0 ಗೇಮ್‌ಗಳ ಅಂತರದಲ್ಲಿ ಗೆದ್ದಿದ್ದಾನೆ. 3ನೇ ದಿನದಂದು ಶ್ರೀಲಂಕಾ ತಂಡದ ವಿರುದ್ಧವೂ ಸಿಂಗಲ್ಸ್‌ನಲ್ಲಿ 6-0, 6-0 ಮತ್ತು ಡಬಲ್ಸ್‌ನಲ್ಲಿ 6-2, 6-2 ಅಂತರದಲ್ಲಿ ಗೆದ್ದು, 4ನೇ ದಿನ ಪಾಕಿಸ್ತಾನ ಆಟಗಾರನ ವಿರುದ್ಧ ಸಿಂಗಲ್ಸ್‌ನಲ್ಲಿ 6-0, 6-0 ಗೇಮ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾನೆ.
ಪಂದ್ಯಾವಳಿಯಲ್ಲಿ ಎಲ್ಲ ನಾಲ್ಕೂ ಸುತ್ತುಗಳಲ್ಲೂ ಗೆದ್ದ ಪುನೀತ್ ಮನೋಹರ್ ಹೊಸ ದಾಖಲೆ ಸೃಷ್ಟಿಸಿದ್ದಾನೆ. ಈ ಮೂಲಕ ಮುಂದಿನ ಸೆಪ್ಟೆಂಬರ್‌ನಲ್ಲಿ ಕಝಕಿಸ್ತಾನ್‌ನಲ್ಲಿ ನಡೆಯುವ ಏಷ್ಯಾ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಗಳಿಸಿದ್ದಾನೆ. ಒಂದೂ ಗೇಮ್‌ನಲ್ಲ್ಲೂ ಸೋಲಿಲ್ಲ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ದಕ್ಷಿಣ ಏಷ್ಯಾದ 7 ರಾಷ್ಟ್ರಗಳ ಆಟಗಾರರ ಪೈಕಿ ಸಿಂಗಲ್ಸ್‌ನಲ್ಲಿ ಎದುರಾಳಿಗಳ ವಿರುದ್ಧ ಎಲ್ಲ ಪಂದ್ಯಗಳಲ್ಲೂ 6-0, 6-0 ಗೇಮ್‌ಗಳ ಅಂತರದಿಂದ ಗೆದ್ದಿರುವುದು ದಾಖಲೆಯಾಗಿದೆ. ಕೋಚ್ ಇಂದ್ರಕುಮಾರ್ ಮಹಾಜನ್ ಮಾರ್ಗದರ್ಶನದಲ್ಲಿ ಎಂ.ಪುನೀತ್ ಮನೋಹರ್ ಈ ಸಾಧನೆ ಮಾಡಿದ್ದಾರೆ.