ಪಂಕಜ ಕೆ.ಎಂ. ಬೆಂಗಳೂರು
ಹಠಾತ್ ಹೃದಯಾಘಾತದಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣ ತಗ್ಗಿಸಲು ಆರೋಗ್ಯ ಇಲಾಖೆ ರೂಪಿಸಿರುವ ‘ಹೃದಯ ಸ್ನಾಯುವಿನ ಸೋಂಕು ನಿವಾರಣೆ’ (ಸ್ಟೆಮಿ) ಯೋಜನೆ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ‘ಪುನೀತ್ ರಾಜ್‌ಕುಮಾರ್ ಹೃದಯ ಚಿಕಿತ್ಸೆ ಯೋಜನೆ’ಯೊಂದಿಗೆ ವಿಲೀನಗೊಳ್ಳಲಿದ್ದು, ಶೀಘ್ರದಲ್ಲೇ 2ನೇ ಹಂತಕ್ಕೆ ಚಾಲನೆ ದೊರೆಯಲಿದೆ.
ಹೃದಯಾಘಾತ ಸಂಭವಿಸಿದ ಒಂದು ಗಂಟೆಯೊಳಗೆ (ಗೋಲ್ಡನ್ ಅವರ್) ಅಗತ್ಯ ಚಿಕಿತ್ಸೆ ಒದಗಿಸುವ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಈ ಯೋಜನೆ ಸಹಕಾರಿಯಾಗಿದೆ. ಇದರಿಂದ ಹೃದ್ರೋಗಿಗಳಿಗೆ ತಾಲೂಕು ಮಟ್ಟದಲ್ಲಿಯೇ ಪ್ರಾಥಮಿಕ ಹಂತದ ಚಿಕಿತ್ಸೆ ದೊರೆಯಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ‘ಸ್ಟೆಮಿ’ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳು ಸೇರಿ 35 ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಕಾರ್ಯಗತಗೊಳಿಸಲಾಗಿದೆ.
ಸಿಬ್ಬಂದಿಗೆ ತರಬೇತಿ:
ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣ ಇಸಿಜಿ ಸೇರಿ ಅಗತ್ಯ ಪರೀಕ್ಷೆಗಳನ್ನು ನಡೆಸಿ, ಜಯದೇವ ಸಂಸ್ಥೆಗೆ ವರದಿ ರವಾನಿಸಲಾಗುತ್ತದೆ. ಅಲ್ಲಿನ ತಜ್ಞರು ವರದಿ ಪರಿಶೀಲಿಸಿ ಸೂಕ್ತ ಸಲಹೆ ನೀಡಲಿದ್ದಾರೆ. ಹೃದಯಾಘಾತ ದೃಢಪಟ್ಟವರಿಗೆ ಮಾತ್ರೆಗಳು ಹಾಗೂ ತಲಾ 25 ಸಾವಿರ ರೂ. ದರದ ಚುಚ್ಚುಮದ್ದುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆಗಳು ಅಗತ್ಯವಿದ್ದಲ್ಲಿ ಜಯದೇವ ಆಸ್ಪತ್ರೆಗೆ ರೆರ್ ಮಾಡಲಾಗುತ್ತದೆ. ಇದಕ್ಕಾಗಿ 45 ಕೇಂದ್ರಗಳಲ್ಲಿ ವೈದ್ಯರು, ಶುಶ್ರೂಷಕರು, ವೈದ್ಯಕೀಯ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಚಾಲಕರಿಗೆ ಜಯದೇವ ಸಂಸ್ಥೆಯಿಂದ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಗಿದೆ. ಇನ್ನುಳಿದ ಕೇಂದ್ರಗಳಲ್ಲಿ ತರಬೇತಿಗೆ ಕ್ರಮ ವಹಿಸಲಾಗಿದೆ ಎಂದು ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕ ಡಾ.ಜಿ. ಶ್ರೀನಿವಾಸ್ ತಿಳಿಸಿದರು.
ದಿನದ 24 ಗಂಟೆ ಸೇವೆ
ಈ ಸೇವೆಯಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನಡೆಸುವ ಇಸಿಜಿ ಪರೀಕ್ಷೆ ನಡೆಸಿದರೆ, ಆ ಮಾಹಿತಿ ನೇರವಾಗಿ ಸಂಬಂಧಪಟ್ಟ ಜಯದೇವ ಆಸ್ಪತ್ರೆಗೆ ತಲುಪುತ್ತದೆ. ಅಲ್ಲಿಂದ ಕೇವಲ 3-4 ನಿಮಿಷಗಳಲ್ಲಿ ವರದಿ ರವಾನೆಯಾಗಲಿದೆ. ಸ್ಥಳೀಯವಾಗಿಯೇ ಚಿಕಿತ್ಸೆ ನೀಡಬಹುದೇ ಅಥವಾ ರೆರಲ್ ಅಗತ್ಯವಿದೆಯೇ ಎಂಬುದನ್ನು ತಜ್ಞರು ಸೂಚಿಸಲಿದ್ದಾರೆ. ತಾಲೂಕು ಆಸ್ಪತ್ರೆಗಳಲ್ಲಿ ಈ ಸೇವೆ ದಿನದ 24 ಗಂಟೆಗಳೂ ಲಭ್ಯವಿರಲಿದೆ.
ವೈದ್ಯಕೀಯ ಕಾಲೇಜುಗಳು
ಯೋಜನೆಯ ಎರಡನೇ ಹಂತದಲ್ಲಿ 7 ಕೇಂದ್ರಗಳಲ್ಲಿ ಸೇವೆ ಆರಂಭಿಸಲಾಗುತ್ತದೆ. ಎಲ್ಲ ಕೇಂದ್ರಗಳಿಗೂ ಜಯದೇವ ಆಸ್ಪತ್ರೆಯ ನೆರವು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಏಳು ವೈದ್ಯಕೀಯ ಕಾಲೇಜುಗಳನ್ನು ಕಾರ್ಯಾಚರಣೆ ಕೇಂದ್ರಗಳನ್ನಾಗಿಸಿ ಸೇವೆ ನೀಡಲಾಗುವುದು. ಇದಕ್ಕಾಗಿ ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜು, ಉಡುಪಿಯ ಮಣಿಪಾಲ್ ವೈದ್ಯಕೀಯ ಕಾಲೇಜು, ಶಿವಮೊಗ್ಗದ ವೈದ್ಯಕೀಯ ಕಾಲೇಜು, ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು, ಬೆಳಗಾವಿಯ ಕೆಎಲ್‌ಇ ವೈದ್ಯಕೀಯ ಕಾಲೇಜು, ಬಾಗಲಕೋಟೆಯ ವೈದ್ಯಕೀಯ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಏಳು ಹಬ್‌ಗಳು, 35 ತಾಲೂಕು ಆಸ್ಪತ್ರೆಗಳು,5 ಜಿಲ್ಲಾ ಆಸ್ಪತ್ರೆಗಳನ್ನು ಈ ವೈದ್ಯಕೀಯ ಕಾಲೇಜುಗಳಿಗೆ ಸಂಪರ್ಕಿಸಲಾಗುವುದು.
ಪುನೀತ್ ಹೃದಯ ಚಿಕಿತ್ಸೆ ಯೋಜನೆ
ಹಠಾತ್ ಹೃದಯ ಸಂಬಂಧಿ ಸಾವು ತಡೆಯಲು ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ‘ಸ್ಟೆಮಿ’ ಯೋಜನೆಯ ಯಶಸ್ಸಿನಿಂದ ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಟೊಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲ್ಲೇಟರ್ಸ್ (ಎಇಡಿ) ಸಾಧನ ಅಳವಡಿಸಲಾಗುತ್ತಿದೆ. ಇದು ಎದೆ ಬಡಿತವನ್ನು ಪುನರಾರಂಭಿಸಲು ಸಹಕಾರಿಯಾಗಲಿದೆ. ತಾಲೂಕು ಆಸ್ಪತ್ರೆಗಳಿಗೆ ಎಇಡಿ ಸಾಧನಗಳನ್ನು ಪೂರೈಸಲು ಕ್ರಮ ವಹಿಸಲಾಗುತ್ತಿದೆ.
ಹೃದ್ರೋಗ ಸಂಬಂಧ ತಾಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯುವ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕೆ ಅಗತ್ಯವಾದ ಔಷಧಗಳನ್ನೂ ಸಹ ಒದಗಿಸಲು ಕೆಎಸ್‌ಎಂಎಸ್‌ಸಿಎಲ್ ಜತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ‘ಸ್ಟೆಮಿ’ ಯೋಜನೆಯಡಿ ಬೇಕಾಗುವ ಔಷಧಗಳನ್ನು ಶೀಘ್ರದಲ್ಲೇ ಎಲ್ಲ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಪೂರೈಸಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.