ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ವೆನ್ಲಾಕ್ ಆಸ್ಪತ್ರೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಸ್ಪೀಕರ್ ಯು.ಟಿ. ಖಾದರ್, ಎಂಎಲ್‌ಸಿ ಐವನ್ ಡಿಸೋಜಾ ಮತ್ತಿತರರಿದ್ದರು.
- ವೆನ್ಲಾಕ್ ಆಸ್ಪತ್ರೆಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
- ರಾಜ್ಯದಲ್ಲಿ ಒಟ್ಟು 78 ಪುನೀತ್ ಹೃದಯ ಜ್ಯೋತಿ ಕೇಂದ್ರ
- ದ.ಕ. ಜಿಲ್ಲೆಯ ಮೂರು ಕೇಂದ್ರಗಳ ಮೂಲಕ ಈ ವರ್ಷ 450 ಜೀವ ಉಳಿಸುವ ಕಾರ್ಯ
ಮಂಗಳೂರು: ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವ "ಪುನೀತ್ ಹೃದಯ ಜ್ಯೋತಿ' ಯೋಜನೆಯನ್ನು ಶೀಘ್ರವೇ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಅವರು ಶುಕ್ರವಾರ ಕುದುಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಅವರು ವೆನ್ಲಾಕ್ ಆಸ್ಪತ್ರೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಒಟ್ಟು 78 ಪುನೀತ್ ಹೃದಯ ಜ್ಯೋತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದ.ಕ. ಜಿಲ್ಲೆಯಲ್ಲೂ ಮೂರು ಕೇಂದ್ರಗಳಿದ್ದು, ಇವುಗಳ ಮೂಲಕ ಈ ವರ್ಷ 450 ಜೀವ ಉಳಿಸುವ ಕಾರ್ಯವಾಗಿದೆ. ಹಠಾತ್ ಹೃದಯಾಘಾತದ ನಂತರದ ನಿರ್ಣಾಯಕ ಅವಧಿಯಲ್ಲಿ ತ್ವರಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ನೀಡಲಾಗುವ ಟೆನೆಕ್ಟೆಪ್ಲೇಸ್ ಎಂಬ ದುಬಾರಿ ಇಂಜೆಕ್ಷನ್ ಅನ್ನು ಸರ್ಕಾರದಿಂದ ಉಚಿತವಾಗಿ ನೀಡುವ ಜೊತೆಗೆ ಅತ್ಯಲ್ಪದಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದವರು ಹೇಳಿದರು.
ಹೆಚ್ಚುವರಿ 4 ಎಂಡೋ ಪಾಲನಾ ಕೇಂದ್ರಗಳು
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೇವೆ ನೀಡುವ ಎರಡು ಪಾಲನಾ ಕೇಂದ್ರಗಳಿವೆ. ಕಳೆದ ಆರು ವರ್ಷಗಳಿಂದ ಹೆಚ್ಚುವರಿ ಪಾಲನಾ ಕೇಂದ್ರಗಳ ಬೇಡಿಕೆಯಂತೆ ಸರ್ಕಾರ 4 ಹೆಚ್ಚುವರಿ ಪಾಲನಾ ಕೇಂದ್ರಗಳನ್ನು ನೀಡಿದೆ. ಪುತ್ತೂರು ತಾಲೂಕಿನ ಪಾಣಾಜೆ, ಬೆಳ್ತಂಗಡಿಯ ಕಣಿಯೂರು, ಬಂಟ್ವಾಳದ ವಿಟ್ಲ ಹಾಗೂ ಸುಳ್ಯದ ಬೆಳ್ಳಾರೆಗೆ ಕೇಂದ್ರಗಳು ಮಂಜೂರು ಮಾಡಿದೆ. 2026-27ನೇ ಸಾಲಿಗೆ ಈ ಹೊಸ ನಾಲ್ಕು ಪಾಲನಾ ಕೇಂದ್ರಗಳ ನಿರ್ವಹಣೆಗೆ 1.26 ಕೋಟಿ ರೂ. ಅನುದಾನವನ್ನು ಸರ್ಕಾರ ಮೀಸಲಿಟ್ಟಿದ್ದು, ಜೂ. 1ರಿಂದ ಈ ಕೇಂದ್ರಗಳು ಕಾರ್ಯಾರಂಭಿಸಲಿವೆ ಎಂದು ಸಚಿವರು ತಿಳಿಸಿದರು.
ಗುಣಮಟ್ಟದ ಸೇವೆಗಾಗಿ ಖಾಸಗಿ ಜೊತೆ ಒಪ್ಪಂದ
ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮತ್ತು ನುರಿತ ತಜ್ಞ ವೈದ್ಯರ ಸೇವೆಯನ್ನು ಗ್ರಾಮೀಣ ಮಟ್ಟದಲ್ಲೂ ಉಚಿತವಾಗಿ ಒದಗಿಸುವ ಉದ್ದೇಶದಿಂದ ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆ ಬಂಟ್ವಾಳ ಎಜೆ ವೈದ್ಯಕೀಯ ಕಾಲೇಜಿನೊಂದಿಗೆ, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ಆಳ್ವಾಸ್ ವೈದ್ಯಕೀಯ ಕಾಲೇಜಿನ ಜೊತೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ವಿಟ್ಲವನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನ ಜೊತೆ ಒಡಂಬಡಿಕೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ಜೊತೆ ಒಡಂಬಡಿಕೆಯಾದ ನಂತರ ಬಂಟ್ವಾಳದಲ್ಲಿ ಉಚಿತವಾಗಿ ಎರಡು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ಕೆಲವರು ಮಾಹಿತಿ ಕೊರತೆಯಿಂದ ಟೀಕಿಸುತ್ತಿದ್ದಾರೆ ಅಷ್ಟೇ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ವಿದ್ಯುತ್ ಸರಬರಾಜು ಕಂಪೆನಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೊ, ಗೋಡಂಬಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಎಂಆರ್‌ಪಿಎಲ್‌ನ ಪ್ರಕಾಶ್ ಶಂಕರ್, ಪ್ರಶಾಂತ್ ಬಾಳಿಗಾ, ಕೆಎಂಸಿ ಡೀನ್ ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ಸ್ವಾಗತಿಸಿದರು. ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಪ್ರಸ್ತಾವನೆಗೈದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶಂಕುಸ್ಥಾಪನೆಗೊಂಡ ಕಾಮಗಾರಿಗಳು
* ವೆನ್‌ಲಾಕ್ ಜಿಲ್ಲಾಸ್ಪತ್ರೆ ಮೊದಲನೇ ಹಂತದ ನೂತನ ಹೊರರೋಗಿ ವಿಭಾಗದ ಕಾಮಗಾರಿಗೆ 70 ಕೋಟಿ ರೂ. ಮಂಜೂರಾಗಿದ್ದು, 35 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ.
* ವೆನ್‌ಲಾಕ್ ಜಿಲ್ಲಾಸ್ಪತ್ರೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 500 ಕೆಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಘಟಕ ನಿರ್ಮಾಣ.
* ಎಂಆರ್‌ಪಿಎಲ್‌ನ ಸಿಎಸ್‌ಆರ್‌ನ 10 ಕೋಟಿ ರೂ. ವೆಚ್ಚದಲ್ಲಿ ವೆನ್‌ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್‌ನ 4ನೇ ಮತ್ತು 5ನೇ ಮಹಡಿ ಕಾಮಗಾರಿ ಶಂಕುಸ್ಥಾಪನೆಗೊಂಡವು.
ದೇಶದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದಿಂದಲೇ ಸಾಧ್ಯವಿಲ್ಲ. ಆರೋಗ್ಯ ಶಿಕ್ಷಣ, ಹೌಸಿಂಗ್‌ನಲ್ಲಿ ಸರ್ಕಾರವು ಖಾಸಗಿಯವರ ಸಹಭಾಗಿತ್ವದಲ್ಲಿ ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ. ದ.ಕ. ಜಿಲ್ಲೆಯಲ್ಲಿ ಬಹಳಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಅಲ್ಲಿನ ತಜ್ಞರ ಸೇವೆಯು ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕಿದೆ. ಇದರ ಬಗ್ಗೆ ಬೀದಿಗಳಲ್ಲಿ ಕುಳಿತು ಟೀಕಿಸುವ ಬದಲು ಸಚಿವರ ಜೊತೆ ಚರ್ಚಿಸುವ ಕೆಲಸವಾಗಲಿ.
— ಯು.ಟಿ. ಖಾದರ್, ವಿಧಾನಸಭಾದ್ಯಕ್ಷ