ಜಿಲ್ಲೆ

ಪ್ರತಿಯೊಬ್ಬ ಕ್ರೀಡಾಪಟುವಿಗೆ ಸಮಯ ಪಾಲನೆ ಮುಖ್ಯ: ಟಿ.ಪಿ.ರಮೇಶ್

ಮಡಿಕೇರಿ: ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ೨೪ನೇ ವಾರ್ಷಿಕೋತ್ಸವ ಪ್ರಯುಕ್ತ ಪತ್ರಿಕಾ ಭವನದಲ್ಲಿ ಆಯೋಜಿತ ಒಳಾಂಗಣ ಕ್ರೀಡಾಕೂಟವನ್ನು ಹಿರಿಯ ಕಬಡ್ಡಿ ಆಟಗಾರ ಜಿ.ಸಿ.ಕೃಷ್ಣ ಅವರು ಟಿ.ಟಿ ಆಡುವ ಮೂಲಕ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭಕೋರಿದರು.

ಈ ಸಂದರ್ಭ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಮಾತನಾಡಿ, ಪತ್ರಿಕಾ ಭವನ ಆರಂಭವಾದಲ್ಲಿಂದ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ವಾರ್ಷಿಕೋತ್ಸದ ಸಂದರ್ಭ ನಿರಂತರವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ವಿವಿಧ ಕ್ರೀಡಾಕೂಟಗಳಿಗೆ ಅನೇಕ ಪತ್ರಕರ್ತರು ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಕ್ರೀಡಾಪಟುಗಳು ಆಗಮಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು, ಕ್ರೀಡಾಕೂಟಕ್ಕೆ ಶುಭಕೋರಿದರು.

ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ರವಿಕುಮಾರ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ವರ್ಷಂಪ್ರತಿ ತನ್ನ ವಾರ್ಷಿಕೋತ್ಸವ ಸಂದರ್ಭ ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬದವರಿಗಾಗಿ ವಿವಿಧ ಒಳಾಂಗಣ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಪತ್ರಕರ್ತರು ತಮ್ಮ ದೈನಂದಿನ ವರದಿ ಸಂಗ್ರಹದ ಜಂಜಾಟದಿಂದ ಹೊರಬಂದು ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತಾಗಬೇಕೆಂಬ ಉದ್ದೇಶದಿಂದ ಒಳಾಂಗಣ ಕ್ರೀಡಾಕೂಟವನ್ನು ಆಯೋಜಿಸಿರುವುದಾಗಿ ಹೇಳಿದರು.

ಕ್ರೀಡಾಕೂಟದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಟ್ರಸ್ಟಿ ಎಂ.ಶ್ರೀಧರ್ ಹೂವಲ್ಲಿ, ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಟ್ರಸ್ಟಿಗಳು, ಕೊಡಗು ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.

ಕ್ರೀಡಾ ವಿಜೇತರ ವಿವರ: ಟೇಬಲ್ ಟೆನ್ನಿಸ್ ಸಿಂಗಲ್ಸ್ ವಿಭಾಗದಲ್ಲಿ ಉಮೇಶ್(ಪ್ರ), ರಾಜೇಶ್(ದ್ವಿ), ಟಿ.ಪಿ.ರಮೇಶ್ ತೃತೀಯ ಸ್ಥಾನ ಪಡೆದರೆ, ಟೇಬಲ್ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ರಾಜೇಶ್ ಮತ್ತು ಹನಿಫ್(ಪ್ರ), ಟಿ.ಪಿ.ರಮೇಶ್ ಮತ್ತು ವಿನೋದ್ ಮೂಡಗದ್ದೆ(ದ್ವಿ), ಟಿ.ಕೆ.ಸಂತೋಷ್ ಮತ್ತು ಉಮೇಶ್ ತೃತೀಯ ಸ್ಥಾನ ಪಡೆದರು.

ಕೇರಂ ಸಿಂಗಲ್ಸ್ ವಿಭಾಗದಲ್ಲಿ ನಾಸಿರ್(ಪ್ರ), ರಾಜೇಶ್(ದ್ವಿ), ಕೇರಂ ಡಬಲ್ಸ್ ವಿಭಾಗದಲ್ಲಿ ಟಿ.ಪಿ.ರಮೇಶ್ ಮತ್ತು ಹನಿಫ್(ಪ್ರ), ನಾಸಿರ್ ಮತ್ತು ರಂಜಿತ್ ಕವಲಪಾರ(ದ್ವಿ), ಚೆಸ್‌ನಲ್ಲಿ ಡಿ.ಪಿ.ಲೋಕೇಶ್(ಪ್ರ), ವಿನೋದ್‌ಮೂಡಗದ್ದೆ(ದ್ವಿ), ಮಕ್ಕಳ ವಿಭಾಗದಲ್ಲಿ ಟೇಬಲ್ ಟೆನ್ನಿಸ್ ವಿಶ್ವಾಸ್ ವೆಂಕಟ್(ಪ್ರ), ಧನುಶ್(ದ್ವಿ), ಕೇರಂ ಹೃತಿಕ್ಷ(ಪ್ರ), ವಿಶ್ವಾಸ್ ವೆಂಕಟ್(ದ್ವಿ), ಚೆಸ್‌ನಲ್ಲಿ ವಿಶ್ವಾಸ್ ವೆಂಕಟ್(ಪ್ರ), ಮೋಕ್ಷದಾಯಿನಿ(ದ್ವಿ) ತರುಣ್ ಬಜೆಕೊಡಿ, ಭುವಿತ್, ವಿದ್ವತ್ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.