ಮಡಿಕೇರಿ: ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಫೆ.೧೧ ಮತ್ತು ೧೨ ರಂದು ಮಹಾಗಣಪತಿ ಹಾಗೂ ನಾಗ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ.
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಲಿದೆ. ಫೆ.೧೧ ರಂದು ಸಂಜೆ ೫ ಗಂಟೆಗೆ ಹಸಿರು ಹೊರೆಕಾಣಿಕೆ, ಉಗ್ರಾಣ ಪೂಜೆ ನಡೆಯಲಿದ್ದು, ಸಂಜೆ ೬ ಗಂಟೆಗೆ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ೭.೩೦ ಗಂಟೆಗೆ ದೀಪಾರಾಧನೆ, ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನೆರವೇರಲಿದೆ.
ಫೆ.೧೨ ರಂದು ಬೆಳಿಗ್ಗೆ ೮ ಗಂಟೆಯಿಂದ ಪುಣ್ಯಾಹವಾಚನ, ಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಗುಳಿಗ, ಚಾಮುಂಡಿ ತಂಬಿಲ, ಮಹಾಪೂಜೆ ಮತ್ತು ಅನ್ನದಾನ ನೆರವೇರಲಿದ್ದು, ಸಂಜೆ ೫.೩೦ ರಿಂದ ರಂಗಪೂಜೆ, ೭ ಗಂಟೆಯಿಂದ ದೇವರ ಬಲಿ ಉತ್ಸವ, ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ ಮತ್ತು ಅನ್ನದಾನ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.