ಜಿಲ್ಲೆ

೩.೨೭ ಕೋಟಿ ರೂ. ಲಾಭ ಗಳಿಕೆ - ಪುಣಚ ಸಹಕಾರಿ ಮಹಾಸಭೆಯಲ್ಲಿ ಅಮೈ ಜನಾರ್ದನ ಭಟ್ ಮಾಹಿತಿ - ಸದಸ್ಯರಿಗೆ ಶೇ.೧೧ ಡಿವಿಡೆಂಡ್

Mangaluru - Nishantha Narayana

ವಿಟ್ಲ: ಪುಣಚ ಪ್ರಾಥಮಿಕ ವ್ಯವಸ್ಥಾಯ ಸೇವಾ ಸಹಕಾರ ಸಂಘ ೨೦೨೪-೨೫ನೇ ಸಾಲಿನಲ್ಲಿ ೩೨೭ ಕೋಟಿ ರೂ. ವ್ಯವಹಾರ ನಡೆಸಿ, ೩.೨೭ ಕೋಟಿ ರೂ. ಗರಿಷ್ಠ ಲಾಭ ಗಳಿಸಿದೆ. ಮುಂದಿನ ೫೦ ವರ್ಷಗಳಿಗೆ ಸಹಕಾರಿಯಾಗುವ ರೀತಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಗುರಿ ಇಟ್ಟುಕೊಳ್ಳಲಾಗಿದೆ. ಸದಸ್ಯರ ಕೋರಿಕೆಯಂತೆ ಅಡಕೆ ಕೊಳೆರೋಗದ ಬಗ್ಗೆ ನಿರ್ಣಯ ಮಾಡುವ ಜತೆಗೆ ಶೇ.೧೧ ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಅಮೈ ಜನಾರ್ದನ ಭಟ್ ಹೇಳಿದರು.

ಪುಣಚ ಪ್ರಾಥಮಿಕ ವ್ಯವಸ್ಥಾಯ ಸೇವಾ ಸಹಕಾರ ಸಂಘ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಸ್ತಿ ಸಾಲಗಳು ಭವಿಷ್ಯದಲ್ಲಿ ಅಪಾಯವನ್ನುಂಟು ಮಾಡುವ ಕಾರಣ ಅದು ಹೆಚ್ಚಾಗದಂತೆ ನೋಡಬೇಕು. ಸಂಘ ಉತ್ತಮ ಲಾಭದಲ್ಲಿದ್ದು, ಕೊಳೆರೋಗದಿಂದ ಕಂಗೆಟ್ಟ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಡಿವಿಡೆಂಡನ್ನು ಶೇ.೨೦ಕ್ಕೆ ಏರಿಸಬೇಕು. ಹಿಂದಿನ ವರ್ಷಗಳ ಡಿವಿಡೆಂಡ್ ವಿತರಣೆಗೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳು ಸದಸ್ಯರಿಂದ ವ್ಯಕ್ತವಾಯಿತು.

ಉಪಾಧ್ಯಕ್ಷ ಪ್ರೀತಮ್ ಪೂಂಜ, ನಿರ್ದೇಶಕರಾದ ಬಾಲಚಂದ್ರ ಕೆ., ತಾರಾನಾಥ ಆಳ್ವ, ರಾಧಾಕೃಷ್ಣ ಪಿ., ಚಂದಪ್ಪ ನಾಯ್ಕ ಕೆ.ಪಿ., ವಿಷ್ನೇಶ್ವರ ಎನ್., ಜಯರಾಮ ನಾಯ್ಕ ಕೆ., ಪ್ರವೀಣ್ ಪ್ರಭು ಡಿ., ದಯಾನಂದ ಬಿ., ಹರಿಣಾಕ್ಷಿ ಪಿ., ಕಿಶೋರ್ ಕುಮಾರ್ ಎಸ್., ಶ್ರೀಲತಾ ಬಿ. ಮತ್ತಿತರರು ಉಪಸ್ಥಿತರಿದ್ದರು.

ತೋರಣಕಟ್ಟೆ ಶಾಖೆ ವ್ಯವಸ್ಥಾಪಕ ಶಂಕರ ಮಹಾಸಭೆ ಪತ್ರ ವಾಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ವಿನಯ ಪೂಜಾರಿ ಬಿ. ವಾರ್ಷಿಕ ವರದಿ ವಾಚಿಸಿದರು.

ಸನ್ಮಾನ, ಸಹಾಯ

ಹಿರಿಯ ಸದಸ್ಯರಾದ ಡಾ.ವಿಘ್ನೇಶ್ವರ ವರ್ಮುಡಿ, ಬಾಬು ಗೌಡ ಗುರ್ಮೆ, ಜಯಂತ ಪ್ರಭು ಆಜೇರು, ಮೂಸೆ ಬ್ಯಾರಿ ಬಡೆಕ್ಕೋಡಿ, ದಯಾನಂದ ಉಳಯ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಿಬ್ಬಂದಿ ಗಂಗಾಧರ ನಾಯ್ಕ ಅವರನ್ನು ಗೌರವಿಸಲಾಯಿತು. ಅನಾರೋಗ್ಯ ಪೀಡಿತ ಸದಸ್ಯರಿಗೆ ಸಹಾಯಧನ ವಿತರಿಸಲಾಯಿತು.

ಕೊಳೆರೋಗದ ತೀವ್ರತೆ ಬಗ್ಗೆ ಸಹಕಾರಿ ಸಂಘದಿಂದ ಸೂಕ್ತ ಪರಿಹಾರದ ನಿರ್ಣಯ ಕೈಗೊಂಡು ಜಿಲ್ಲಾ ಸಹಕಾರಿಗೆ ಕಳುಹಿಸಿಕೊಡಬೇಕು. ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆ ಇಡುವುದರಿಂದ ಸರ್ಕಾರದಿಂದ ಅಗತ್ಯ ನೆರವು ಸಿಗಬಹುದು. ಸಂಘದಿಂದ ಬಲವಾದ ಪ್ರಸ್ತಾವನೆ ಹೋದರೆ ಮಾತ್ರ ಪ್ರಯೋಜನವಾಗುತ್ತದೆ. ಹಿಂದೆ ಈ ರೀತಿಯ ನಿರ್ಣಯದಿಂದ ರೈತರಿಗೆ ಸಹಾಯವಾಗಿತ್ತು.

| ಡಾ.ವಿಘ್ನೇಶ್ವರ ವರ್ಮುಡಿ, ಸಂಘದ ಸದಸ್ಯರು