ಮಂಗಳೂರು: ನಗರದ ಪಂಪ್‌ವೆಲ್ ಬಳಿ ಇರುವ ನವಯುಗ ಕ್ರೆಡಿಟ್ ಸೌಹಾರ್ದ ಸಹಕಾರದಿಂದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಸಂಘದ ಮ್ಯಾನೇಜರ್ ಹಾಗೂ ಅಭಿವೃದ್ಧಿ ವ್ಯವಸ್ಥಾಪಕರು ಗುರುವಾರ ಸಂಜೆ 5.45ರ ಸುಮಾರಿಗೆ ಚಿನ್ನಾಭರಣ ಮತ್ತು ನಗದು ಹಣವನ್ನು ಲಾಕರ್ ರೂಮ್‌ನ ತಿಜೋರಿಯಲ್ಲಿಟ್ಟು ಲಾಕ್ ಮಾಡಿ ಕೀಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕೊಠಡಿಯ ಮೇಜಿನ ಡ್ರಾವರ್‌ನಲ್ಲಿಟ್ಟು ಶಟರ್ ಬಂದ್ ಮಾಡಿ ಹೋಗಿದ್ದರು. ಶುಕ್ರವಾರ ಬೆಳಗ್ಗೆ 9.40ಕ್ಕೆ ಸಂಘದ ಅಧ್ಯಕ್ಷರು ಮತ್ತು ಸಿಬಂದಿ ಬಂದು ಬಾಗಿಲು ತೆರೆದು ನೋಡಿದಾಗ ಯಾರೋ ಕಳ್ಳರು ಕಿಟಕಿಯ ಸರಳುಗಳನ್ನು ತುಂಡು ಮಾಡಿ ಡ್ರಾವರ್‌ನಲ್ಲಿದ್ದ ಕೀಗಳ ಸಹಾಯದಿಂದ ತಿಜೋರಿಯ ಬಾಗಿಲು ತೆರೆದು 7 ಲ.ರೂ. ಮೌಲ್ಯದ ಚಿನ್ನಾಭರಣ ಮತ್ತು 57,832 ರೂ. ಕಳವು ಮಾಡಿರುವುದು ಗೊತ್ತಾಗಿದೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.