ಜಿಲ್ಲೆ

ಪಂಪ್‌ವೆಲ್-ಕಪಿತಾನಿಯೋ ಪಾದಚಾರಿಗಳ ಸಂಚಾರ ಸಂಚಕಾರ

ಹರೀಶ ಎಂ.

ಮಂಗಳೂರು: ನಗರದ ಪಂಪ್‌ವೆಲ್‌ನಿಂದ ಕಪಿತಾನಿಯೋ ತನಕ ಚತುಷ್ಪಥ ರಸ್ತೆಯಾದ ಬಳಿಕ ಪಾದಚಾರಿಗಳ ಸಂಚಾರಕ್ಕೆ ಸೂಕ್ತ ಫುಟ್‌ಪಾತ್‌ಗಳಿಲ್ಲದೆ ರಸ್ತೆಯಲ್ಲೇ ಅಪಾಯಕಾರಿಯಾಗಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗ್ಗೆ ಮತ್ತು ಸಂಜೆ ಈ ಭಾಗದ ಶಾಲಾ ಮಕ್ಕಳು, ಉದ್ಯೋಗಕ್ಕೆ ಹೋಗುವ ಮಹಿಳೆಯರು ಹೆಚ್ಚಾಗಿ ಇಲ್ಲಿ ನಡೆದುಕೊಂಡು ಹೋಗುತ್ತಾರೆ. ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ರಸ್ತೆ ಬದಿಯಲ್ಲಿ ಜಾಗವೇ ಇಲ್ಲ. ಆದ್ದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಅನಿವಾರ್ಯ. ಈ ಸಂದರ್ಭ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಯಾಗುವ ಸಾಧ್ಯತೆ ಹೆಚ್ಚಿದೆ. ಹಲವು ಸಮಯದಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ, ಸಂಬಂಧಪಟ್ಟ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕುಂಟುತ್ತಾ ಸಾಗಿದ ಕಾಮಗಾರಿ: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹಮ್ಮಿಕೊಂಡಿರುವ ಪಡೀಲ್-ಪಂಪುವೆಲ್ 2.8 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿ ನಾಲ್ಕೈದು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಇಕ್ಕೆಲಗಳಲ್ಲಿ ಫುಟ್‌ಪಾತ್, ಚರಂಡಿ ಕಾಮಗಾರಿ ಹಲವು ಕಡೆ ಬಾಕಿಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಮಾಡದಿದ್ದರೆ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗಿ ಮತ್ತಷ್ಟು ಸಮಸ್ಯೆಗಳಾಗಲಿವೆ.

ಪಂಪ್‌ವೆಲ್‌ನಲ್ಲಿ ರಾತ್ರಿ ವೇಳೆ ಬೆಂಗಳೂರು ಕಡೆಗೆ ಹೋಗುವ ಬಸ್‌ಗಳು ಸಾಲಾಗಿ ನಿಲ್ಲುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಪ್ರಯಾಣಿಕರಿಗೆ ರಸ್ತೆ ಬದಿ ನಿಲ್ಲಲು ವ್ಯವಸ್ಥೆ ಇಲ್ಲ. ಮಳೆ ಬರುವಾಗ ಕೊಡೆ ಹಿಡಿದುಕೊಂಡು ನಿಲ್ಲುವ ಸ್ಥಿತಿ ಇದೆ. ಪಾಲಿಕೆ ಈ ನಿಟ್ಟಿನಲ್ಲಿ ಸೂಕ್ತ ಸೌಲಭ್ಯ ಕಲ್ಪಿಸುವತ್ತ ಗಮನ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಒತ್ತಾಯಿಸಿದ್ದಾರೆ.