ಬೇಲೂರು: ತಾಲೂಕಿನಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 5 ವರ್ಷದೊಳಗಿನ ಸುಮಾರು 14, 794 ಮಕ್ಕಳಿದ್ದಾರೆ. ಪೋಲಿಯೋ ಲಸಿಕೆ ಹಾಕಿಸುವುದರಿಂದ ಅಂಗವಿಲಕತೆ ತಡೆಗಟ್ಟಬಹುದು. ಇದಕ್ಕಾಗಿ ತಾಲೂಕಿನಲ್ಲಿ ಒಟ್ಟ 92 ಬೂತ್‌ಗಳನ್ನು ನಿಯೋಜಿಸಲಾಗಿದೆ. ಪಾಲಕರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಭಾರತವನ್ನು ಪೋಲಿಯೋಮುಕ್ತ ರಾಷ್ಟ್ರವನ್ನಾಗಿ ಘೋಷಿಸಿದರೂ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನಗಳಲ್ಲಿ ಪೋಲಿಯೋ ಇನ್ನು ಕಂಡು ಬರುತ್ತಿರುವ ಕಾರಣ ದೇಶದಲ್ಲಿ ಇನ್ನೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಬೂತ್‌ಗೆ ಬರಲು ಸಾಧ್ಯವಾಗದಿದ್ದವರಿಗೆ ಮನೆಗಳಿಗೆ ತೆರಳಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ದಿವ್ಯಾ ಗಿರೀಶ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದರ್, ವೈದ್ಯಾಧಿಕಾರಿ ಡಾ.ಸುಧಾ, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಮಂಗಳಮ್ಮ, ಕಸಾಪ ಅಧ್ಯಕ್ಷ ರಾಜೇಗೌಡ, ರೋಟರಿ ಸಂಸ್ಥೆಯ ವಿನೋದ್ ಚೌಡ, ಸುನೀಲ್ ರೆಬೆಲ್ಲೊ, ಆಸ್ಪತ್ರೆ ಸಿಬ್ಬಂದಿ ಇದ್ದರು.