ಜಿಲ್ಲೆ

ಮಾ.3ರಂದು ತಪ್ಪದೇ ಪಲ್ಸ್ ಪೋಲಿಯೋ ಹಾಕಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಮನವಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಮಾ.3ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಾಲಕರು ತಪ್ಪದೇ ತಮ್ಮ 0-5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಕೊಡಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 3ರಂದು ಆರೋಗ್ಯ ಇಲಾಖೆಯ ತೆರೆಯುವ ಬೂತ್‌ನಲ್ಲಿ ಲಸಿಕೆ ನೀಡಲಾಗುವುದು. ಲಸಿಕೆ ಪಡೆಯದಿರುವ ಮಕ್ಕಳಿಗೆ 4 ರಿಂದ 6ವರೆಗೆ ಮನೆ ಮನೆಗೆ ಭೇಟಿ ನೀಡಿ ನೀಡಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಈ ಹಿಂದೆ ಎಷ್ಟು ಬಾರಿ ಪಲ್ಸ್ ಪೋಲಿಯೋ ಲಸಿಕೆ ನೀಡಿದರೂ ಸಹ ಹೆಚ್ಚುವರಿಯಾಗಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು. ಈ ಬಗ್ಗೆ ವ್ಯಾಪಕ ಪ್ರಚಾರವಾಗಬೇಕು. ಹಳ್ಳಿಯಲ್ಲಿ ಮನೆ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಲಸಿಕೆ ಹಾಕಿಸಲು ತಿಳಿಸಬೇಕು. ಹೊರ ರಾಜ್ಯದಿಂದ ಕಬ್ಬು ಕಟಾವು ಮಾಡಲು ಬಂದಿರುವ ಕುಟುಂಬ ಹಾಗೂ ವಲಸೆ ಕಾರ್ಮಿಕರ ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದರು.
ಕಾರ್ಯಕ್ರಮ ನಡೆಯುವ ಎಲ್ಲ ಶಾಲೆಗಳಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಜನಸಾಮಾನ್ಯರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಚೆಸ್ಕಾಂ, ಪ್ರಾದೇಶಿಕ ಸಾರಿಗೆ, ವಾರ್ತಾ, ಪೌರಾಡಳಿತ ಇಲಾಖೆ, ಇತರೆ ಸ್ವಯಂಸೇವಾ ಸಂಸ್ಥೆ, ಸರ್ಕಾರಿ ಹಾಗೂ ಖಾಸಗಿ ನರ್ಸಿಂಗ್ ಶಾಲೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು. ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಕಮಿಟಿ ಸಭೆಯನ್ನು ತಾಲೂಕು ಆರೋಗ್ಯಾಧಿಕಾರಿಗಳು ನಿಗದಿತ ಅವಧಿ ಒಳಗೆ ನಡೆಸಿ ಸೂಕ್ತ ಕ್ರಮ ವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ನಿವೃತ್ತ ಆರೋಗ್ಯಾಧಿಕಾರಿ ಡಾ.ಮರೀಗೌಡ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತರಾಜು, ಆರ್‌ಸಿಎಚ್ ಡಾ.ಅನಿಲ್ ಕುಮಾರ್, ದಂತ ವೈದ್ಯಾಧಿಕಾರಿ ಡಾ.ಅರುಣಾನಂದ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಇತರರಿದ್ದರು.

ಕಳೆದ ವರ್ಷ ಶೇ.106ರಷ್ಟು ಸಾಧನೆ
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 1,27,563 ಮಕ್ಕಳಿಗೆ ಲಸಿಕೆ ನೀಡಿ ಶೇ.106.35 ಸಾಧನೆ ಮಾಡಲಾಗಿದೆ. ಮಂಡ್ಯ ತಾಲೂಕಿನಲ್ಲಿ 32,651, ಮದ್ದೂರಿನಲ್ಲಿ 19,036, ಮಳವಳ್ಳಿಯಲ್ಲಿ 19,682, ಪಾಂಡವಪುರದಲ್ಲಿ 12,073, ಶ್ರೀರಂಗಪಟ್ಟಣದಲ್ಲಿ 11,826, ಕೆ.ಆರ್.ಪೇಟೆಯಲ್ಲಿ 17,953 ಹಾಗೂ ನಾಗಮಂಗಲ ತಾಲೂಕಿನಲ್ಲಿ 14,342 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪೋಲಿಯೋ ವೈರಾಣು ನೀರು, ಆಹಾರದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಲೋಳೆಯಿಂದ ಬಾಯಿ, ಮೂಗು ಮೂಲಕ ಹರಡಬಹುದು. ಅಲ್ಲದೆ ಸೋಂಕು ಪೀಡಿತ ರೋಗಿಯ ಸಾಮಿಪ್ಯದಿಂದಲೂ ಹರಡಬಹುದಾಗಿದೆ. ವೈರಾಣು ದೇಹಕ್ಕೆ ಪ್ರವೇಶವಾದ ಬಳಿಕ ರಕ್ತ, ರಕ್ತನಾಳಗಳ ಮೂಲಕ ಹರಡಿ ಹೆಚ್ಚು ವೃದ್ಧಿಸಲಾರಂಭಿಸುತ್ತದೆ. ಸಾಮಾನ್ಯವಾಗಿ 7-14 ದಿನಗಳಲ್ಲಿ ಜ್ವರ, ಬಳಲಿಕೆ, ತಲೆನೋವು, ವಾಂತಿ ಹಾಗೂ ಕೈಕಾಲು ನೋವು ಕಾಣಿಸಲಾರಂಭಿಸುತ್ತದೆ. ಸೋಂಕಿನ ಪರಿಣಾಮ ಕನಿಷ್ಟ 200 ಪ್ರಕರಣಗಳಿಗೊಂದು ವಾಸಿ ಮಾಡಲು ಸಾಧ್ಯವಾಗದಂತೆ ಕಾಲುಗಳು ಸ್ವಾಧೀನತೆ ಕಳೆದುಕೊಳ್ಳಬಹುದು ಎಂದು ವಿವರಿಸಿದರು.
ಪೋಲಿಯೋ ನಿರ್ಮೂಲನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ, ಪೋಲಿಯೋ ಕಣ್ಗಾವಲು ಯೋಜನೆ, ವಿಶ್ವಪೋಲಿಯೋ ನಿರ್ಮೂಲನಾ ಕಾರ್ಯಕ್ರಮ, ರೋಟರಿ ಇಂಟರ್ ನ್ಯಾಷನಲ್, ಯು.ಎಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹಾಗೂ ರೆಡ್‌ಕ್ರಾಸ್ ಸಂಸ್ಥೆಗಳು ಭಾಗವಹಿಸಲಿವೆ ಎಂದು ಹೇಳಿದರು.