ಜಿಲ್ಲೆ

ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಪುನಸ್ಕಾರ

ಕಿರಣ್ ಗೌಡ.ಜಿ

ಮದ್ದೂರು: ಮಹಾಲಯ ಅಮಾವಾಸ್ಯೆ ಅಂಗವಾಗಿ ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ, ಶ್ರೀ ಉಗ್ರ ನರಸಿಂಹಸ್ವಾಮಿ, ಶ್ರೀ ವರದರಾಜ ಸ್ವಾಮಿ, ಶ್ರೀ ಪಟ್ಟಾಭಿರಾಮ, ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ, ಶ್ರೀ ಹೊಳೆ ಆಂಜನೇಯಸ್ವಾಮಿ ಹಾಗೂ ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ವೈದ್ಯನಾಥೇಶ್ವರ, ಆಬಲವಾಡಿ ಗ್ರಾಮದ ತೋಪಿನ ತಿಮ್ಮಪ್ಪ, ಚಿಕ್ಕಂಕನಹಳ್ಳಿ ಶ್ರೀ ನಂದಿ ಬಸವೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಭಕ್ತರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ತೀರ್ಥ, ಪ್ರಸಾದ ಸ್ವೀಕಾರ ಮಾಡಿದರು.

ಮಾಂಸಕ್ಕೆ ಭಾರಿ ಬೇಡಿಕೆ:

ಮಹಾಲಯ ಅಮಾವಾಸ್ಯೆಯಲ್ಲಿ ಮೃತರಾದ ಹಿರಿಯರಿಗೆ ಎಡೆ (ಊಟ) ಇಡುವ ಪದ್ಧತಿಯಿದ್ದು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾಂಸದೂಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಡುವುದರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಕೋಳಿ ಮತ್ತು ಕುರಿ ಮಾಂಸಕ್ಕೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗುಡ್ಡೆ ಮಾಂಸಕ್ಕೆ ಭಾರಿ ಬೇಡಿಕೆ ಇತ್ತು.

ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ, ದಿನಸಿ, ಸಿಹಿ ಸೇರಿದಂತೆ ಹಲವು ವರ್ತಕರಿಗೆ ಉತ್ತಮವಾಗಿ ವ್ಯಾಪಾರ ಮಾಡಿದ್ದು ಕಂಡು ಬಂತು.