ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಆಂಜನೇಯ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿ ವಿಶೇಷ ಪುಜೆ ನಂತರ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. 
ಜಿಲ್ಲೆ

ವಿವಿಧ ಗ್ರಾಮಗಳಲ್ಲಿ ವಿಶೇಷ ಪೂಜೆ

ನಾಗೇಶ ಎಸ್

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ, ಹಂಗಳ, ಬೇಗೂರು, ಆಲತ್ತೂರು, ಭೀಮನಬೀಡು, ಕಣ್ಣೇಗಾಲ, ಕಂದೇಗಾಲ, ರಾಘವಾಪುರ ಸೇರಿದಂತೆ ಶ್ರೀರಾಮ ದೇವಾಲಯಗಳಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಪೂಜೆ ಸಲ್ಲಿಸಲಾಯಿತು.

ತೆರಕಣಾಂಬಿ ಗ್ರಾಮದ ಕೋದಂಡಸ್ವಾಮಿ ದೇವಾಲಯ ಹಾಗೂ ಶ್ರೀ ಆಂಜನೇಯ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಆಂಜನೇಯ ದೇವಾಲಯವನ್ನು ಸಿಂಗರಿಸಿ ದೇವಾಲಯದ ರಸ್ತೆಯಲ್ಲಿ ಕೇಸರಿ ಬಂಟಿಂಗ್ಸ್, ತಳಿರು ತೋರಣ, ಬಾಳೆ ಕಂದುಗಳನ್ನು ಕಟ್ಟಲಾಗಿತ್ತು. ಬೆಳಗಿನಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಲಾಡು ಹಾಗೂ ಸಿಹಿ ವಿತರಣೆ ಮಾಡಲಾಯಿತು. ಅಭಿಷೇಕ, ಮಹಾ ಮಂಗಳಾರತಿ ನಂತರ ಸಾವಿರಾರು ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಹಂಗಳ ಬಸವನಗುಡಿ ಹಾಗೂ ಬೇಗೂರು ಗ್ರಾಮದ ಶ್ರೀ ರಾಮಮಂದಿರ ಹಾಗೂ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.