ಮಂಡ್ಯ: ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಆಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಿ ನಗರದ ಶಕ್ತಿದೇವತೆ ಕಾಳಿಕಾಂಬ ದೇವಾಲಯದಲ್ಲಿ ಶುಕ್ರವಾರ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ಮಾತನಾಡಿ, ಹೆಣ್ಣು ಎಂದರೆ ಶಕ್ತಿ. ಹೆಣ್ಣು ಎಂದರೆ ಪ್ರಕೃತಿ, ಆದರೆ, ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ಜಗತ್ತಿನ ಸೃಷ್ಟಿಗೆ ಕಾರಣರಾದ ಶಕ್ತಿ(ಹೆಣ್ಣು)ಯನ್ನು ಸಂಪೂರ್ಣ ನಾಶ ಮಾಡಬೇಕೆಂಬ ಹೇಳಿಕೆಯನ್ನು ನೀಡಿರುವುದು ಬಾಲಿಶತನದಿಂದ ಕೂಡಿದೆ ಎಂದು ಆರೋಪಿಸಿದರು.
ಈ ಚುನಾವಣೆ ಶಕ್ತಿಯ ಆರಾಧಕರೂ ಹಾಗೂ ಶಕ್ತಿಯನ್ನು ನಾಶ ಮಾಡುತ್ತೇವೆ ಎಂದು ಪಣ ತೊಟ್ಟಿರುವ ವ್ಯಕ್ತಿಗಳ ನಡುವೆ ನಡೆಯಲಿದೆ. ದೇಶದ ಸಮಸ್ತ ಮಹಿಳೆಯರೂ ಈ ಬಾರಿ ನರೇಂದ್ರಮೋದಿ ಅವರ ಕೈ ಬಲಪಡಿಸುತ್ತಾರೆ ಎಂಬ ಅಚಲವಾದ ನಂಬಿಕೆ ಇದೆ. ಬೇಟಿ ಬಚಾವೋ, ಬೇಟಿ ಪಡಾವೋ, ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಅನೇಕ ಕಾರ್ಯಕ್ರಮಗಳು, ಮಹಿಳಾ ಮೀಸಲಾತಿಗೆ ಬಿಜೆಪಿ ಸರ್ಕಾರ ಕೈಗೊಂಡ ದಿಟ್ಟ ಹೆಜ್ಜೆಯಾಗಿದೆ ಎಂದರು.
ಮೋರ್ಚಾದ ಸಿಂಧು, ಶಿಲ್ಪಾ, ವಿಜಯಕುಮಾರಿ, ಮಂಜುಳಾ, ಸವಿತಾ, ಮಂಜುಳಾ, ಶೀಲಾ, ಹೇಮಾ, ಜಯಮಾಲಾ, ಮಧು, ಪವಿತ್ರಾ ಇತರರಿದ್ದರು.