ಜಿಲ್ಲೆ

ಮಾ.4ರಿಂದ 23ರವರೆಗೆ ಪಿಯು ಪರೀಕ್ಷೆ

Tumakuru

ತುಮಕೂರು: 2019-2020ನೇ ಸಾಲಿನ ದ್ವಿತೀಯ ಪದವಿ ಪೂರ್ವ ಕಾಲೇಜು ಪರೀಕ್ಷೆ ಮಾ.4ರಿಂದ 23ರವರೆಗೆ ನಡೆಯಲಿದ್ದು ಜಿಲ್ಲಾಡಳಿತ ಈ ಬಾರಿ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಈ ಬಾರಿ ಜಿಲ್ಲೆಯಲ್ಲಿ 34 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳು ರವಾನೆ ಮಾಡುವ 2 ಖಜಾನೆಗಳಲ್ಲಿ ದಿನದ 24ಗಂಟೆ ಕಾರ್ಯನಿರ್ವಹಿಸುವ ಸಿಸಿ ಕ್ಯಾಮರಾ ಅಳವಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ಜಿಲ್ಲಾ ಖಜಾನೆಯಿಂದ ತುಮಕೂರು, ತುರುವೇಕೆರೆ,ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಕುಣಿಗಲ್ ತಾಲೂಕುಗಳ ವ್ಯಾಪ್ತಿಯಲ್ಲಿನ 24 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ರವಾನೆ ಆಗಲಿವೆ. ಅದೇ ರೀತಿ ಮಧುಗಿರಿ ಉಪ ಖಜಾನೆಯಿಂದ ಮಧುಗಿರಿ, ಶಿರಾ, ಪಾವಗಡ ಹಾಗೂ ಕೊರಟಗೆರೆ ತಾಲೂಕು ವ್ಯಾಪ್ತಿಯ 10 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ಪರೀಕ್ಷಾ ಕೇಂದ್ರಗಳಿಗೆ ರವಾನೆ ಆಗಲಿವೆ. ಈ ಸಂದರ್ಭದಲ್ಲಿ ಹೆಚ್ಚಿನ ನಿಗಾವಹಿಸಲು ತಿಳಿಸಿದರು.

8 ತಂಡ: ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ತುಮಕೂರಿನಿಂದ 8 ಮಾರ್ಗಾಧಿಕಾರಿಗಳ ತಂಡಗಳನ್ನು ಮಧುಗಿರಿಯಿಂದ 4 ಮಾರ್ಗಾಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಮಾರ್ಗಾಧಿಕಾರಿಗಳ ತಂಡಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಯಾ ತಾಲ್ಲೂಕಿನ ತಹಸೀಲ್ದಾರರು ಹಾಗೂ ಪ್ರಾಂಶುಪಾಲರು ಸೇರಿ ಮೂರು ಜನರು ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಕೇಶ್ ಕುಮಾರ್ ಹೇಳಿದರು. ಬಯೋಮೆಟ್ರಿಕ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಆಯಾ ಖಜಾನೆಯಲ್ಲಿ ಜಮಾ ಮಾಡುವುದು, ಪಡೆಯುವುದು ಹಾಗೂ ಪರೀಕ್ಷಾ ಕೇಂದ್ರಗಳಿಗೆ ವಿತರಿಸುವುದು ಈ ತಂಡಗಳ ಜವಾಬ್ದಾರಿಯಾಗಿದೆ.

ಪ್ರಶ್ನೆಪತ್ರಿಕೆಗಳನ್ನು ಹ್ಯಾಂಡ್ಲಿಂಗ್ ಮಾಡುವವರು ಗೌಪ್ಯತೆಯನ್ನು ಕಾಪಾಡಿಕೊಂಡು ಪೊಲೀಸ್ ಬಂದೋಬಸ್ತ್‌ನಲ್ಲಿ ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಯಾವುದೇ ವಿಳಂಬಮಾಡದೇ ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ಹಸ್ತಾಂತರಿಸುವುದು ಅದೇ ಮಾದರಿಯಲ್ಲಿ ಉತ್ತರ ಪತ್ರಿಕೆಗಳನ್ನು ಸಹ ರವಾನೆಗೊಳಿಸುವುದು, ಜಾಗೃತದಳ ಹಾಗೂ ಮಾರ್ಗಾಧಿಕಾರಿಗಳ ತಂಡಗಳ ಸಂಯುಕ್ತ ಜವಾಬ್ದಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ತಿಳಿಸಿದರು. ಮಧುಗಿರಿ ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ. ಗಿರೀಶ್ ದಿಲೀಪ್ ಬಿಡೋಲಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಟಿ.ಎ. ಲಲಿತಾಕುಮಾರಿ, ನಗರ ಡಿವೈಎಸ್‌ಪಿ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಬ್ರೇಕ್ !: ಪ್ರಶ್ನೆಪತ್ರಿಕೆಗಳ ಸೋರಿಕೆ ಸಂಬಂಧಿಸಿದಂತೆ ಸುಳ್ಳು ವದಂತಿಗಳಿಗೆ ಎಡೆಮಾಡಿಕೊಡದಂತೆ ಎಚ್ಚರವಹಿಸಿ. ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಗೃಹ, ಆರೋಗ್ಯ ಚಿಕಿತ್ಸೆ, ಪೀಠೋಪಕರಣಗಳ ವ್ಯವಸ್ಥೆಗೊಳಿಸಬೇಕು. ಪರೀಕ್ಷಾ ಕೇಂದ್ರಗಳ ಬಳಿ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

ಮೊಬೈಲ್, ಸ್ಮಾರ್ಟ್‌ವಾಚ್, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯವುದು ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಇಂತಹ ಪ್ರಕರಣಗಳು ಜರುಗದಂತೆ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೆ ಮರುಪರೀಕ್ಷೆಗೆ ಅವಕಾಶ ಕೊಡಬಾರದು. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ