ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಮೇ 23 ರಿಂದ ಜೂನ್ 3 ರವರೆಗೆ ಜರುಗಲಿದ್ದು, ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ಜರುಗಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಕುರಿತು ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುಚ್ಛಕ್ತಿ, ಪರೀಕ್ಷಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳ 200 ಮೀಟರ್ ಪರಿಮಿತಿಯೊಳಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ವೀಕ್ಷಕರನ್ನು, ಪ್ರಶ್ನೆಪತ್ರಿಕೆ ವಿತರಿಸುವ ಮಾರ್ಗಾಧಿಕಾರಿಗಳನ್ನು ಮತ್ತು ತ್ರಿಸದಸ್ಯರೊಳಗೊಂಡ ಪ್ರಶ್ನೆ ಪತ್ರಿಕಾ ಪಾಲಕರ ಮತ್ತು ದೃಢೀಕರಿಸುವವರ ಸಮಿತಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷೆಗಳು ಜರುಗುವ ದಿನಗಳಂದು ವೀಕ್ಷಕರು ತಮಗೆ ವಹಿಸಿದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಗಳನ್ನು ಸುಗಮವಾಗಿ ಜರುಗಿಸಲು ಹಾಗೂ ಮಾರ್ಗಾಧಿಕಾರಿಗಳು ಮತ್ತು ತ್ರಿಸದಸ್ಯರೊಳಗೊಂಡ ಪ್ರಶ್ನೆ ಪತ್ರಿಕಾ ಪಾಲಕರ ಸಮಿತಿಯವರು ತಮಗೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ಕರಿಸಿದ್ಧಪ್ಪ ಮಾತನಾಡಿ ಮೇ 23 ರಿಂದ ಜೂನ್ 3 ರವರೆಗೆ ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗಲಿದ್ದು ಒಟ್ಟು 3,769 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಹಾಗೂ ಪರೀಕ್ಷೆಗಳು ಸುವ್ಯವಸ್ಥಿತವಾಗಿ ಜರುಗಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ತಹಶೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ : ಮೇ 23 ರಂದು ಬೆ 10.15 ರಿಂದ 1.30 ರವರೆಗೆ ಕನ್ನಡ , ಅರೇಬಿಕ್ , ಮೇ 24 ರಂದು ಐಚ್ಛಿಕ ಕನ್ನಡ, ರಸಾಯನಶಾಸ್ತ್ರ , ಮೂಲ ಗಣಿತ, ಮೇ 25 ರಂದು ಇಂಗ್ಲೀಷ್ , ಅದೇ ದಿನ ಮಧ್ಯಾಹ್ನ 2.15 ರಿಂದ 5.30 ರವರೆಗೆ ಮಾಹಿತಿ ತಂತ್ರಜ್ಞಾನ , ರಿಟೈಲ್ , ಅಟೋಮೊಬೈಲ್ , ಹೆಲ್ತ್ ಕೇರ್ , ಬ್ಯೂಟಿ ಆಂಡ್ ವೆಲ್ ನೆಸ್ , ಮೇ 26 ರಂದು ಸಮಾಜ ಶಾಸ್ತ್ರ , ವಿದ್ಯುನ್ಮಾನ ಶಾಸ್ತ್ರ , ಗಣಕ ವಿಜ್ಞಾನ , ಮೇ 27 ರಂದು ಇತಿಹಾಸ , ಸಂಖ್ಯಾಶಾಸ್ತ್ರ , ಮೇ 29 ರಂದು ಹಿಂದಿ , ಮಧ್ಯಾಹ್ನ 2.15 ರಿಂದ 5.30 ರವರೆಗೆ ತಮಿಳು, ತೆಲುಗು, ಮಲಯಾಳಂ , ಮರಾಠಿ , ಉರ್ದು , ಸಂಸ್ಕøತ , ಫ್ರೆಂಚ್ , ಮೇ 30 ರಂದು ಭೂಗೋಳಶಾಸ್ತ್ರ , ಮನ:ಶಾಸ್ತ್ರ , ಭೌತಶಾಸ್ತ್ರ , ಮೇ 31 ರಂದು ಲೆಕ್ಕಶಾಸ್ತ್ರ , ಭೂಗರ್ಭಶಾಸ್ತ್ರ , ಶಿಕ್ಷಣ ಶಾಸ್ತ್ರ , ಗೃಹ ವಿಜ್ಞಾನ , ಜೂನ್ 1 ರಂದು ರಾಜ್ಯಶಾಸ್ತ್ರ , ಗಣಿತ ಶಾಸ್ತ್ರ , ಜೂನ್ 2 ರಂದು ತರ್ಕಶಾಸ್ತ್ರ , ಹಿಂದೂಸ್ಥಾನಿ ಸಂಗೀತ, ವ್ಯವಹಾರ ಅದ್ಯಯನ , ಜೂನ್ 3 ರಂದು ಅರ್ಥಶಾಸ್ತ್ರ , ಜೀವ ಶಾಸ್ತ್ರ ಪರೀಕ್ಷೆಗಳು ಜರುಗಲಿವೆ.