ಕಂಪ್ಲಿ: ಪಟ್ಟಣದ 10ನೇವಾರ್ಡ್‌ನ ಮಾರುಕಟ್ಟೆ ಶಾಲೆ ಬಳಿಯ ಸಾರ್ವಜನಿಕ ಮಹಿಳಾ ಶೌಚಗೃಹ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ, ಅಲ್ಲಿನ ಮಹಿಳೆಯರು ಪುರಸಭೆ ಕಚೇರಿಗೆ ಗುರುವಾರ ಧಾವಿಸಿ ಬಂದಿದ್ದರು.
ನಿವಾಸಿ ಗಂಗಮ್ಮ ಮಾತನಾಡಿ, ಸಾರ್ವಜನಿಕ ಶೌಚಗೃಹದಲ್ಲಿ ಸ್ವಚ್ಛತೆಯಿಲ್ಲ. ನೀರಿನ ವ್ಯವಸ್ಥೆಯಿಲ್ಲ. ಬೋರ್ ಕೆಟ್ಟುಹೋಗಿದೆ. ವಿದ್ಯುತ್ ದೀಪ ಸರಿಯಾಗಿ ಬೆಳಗುವುದಿಲ್ಲ. ಶೌಚಗೃಹದ ಕುಣಿ ತುಂಬಿ ರಸ್ತೆಗೆ ಹರಿಯುತ್ತಿದೆ. ಮಹಿಳೆಯರು ಶೌಚಗೃಹ ಬಳಸದಷ್ಟು ಪರಿಸರ ಕೆಟ್ಟುಹೋಗಿದೆ. ದುರಸ್ತಿಗೊಳಿಸಿ ಸುವ್ಯವಸ್ಥೆಯಿಂದ ನಿರ್ವಹಿಸಲು ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು. ಅಲ್ಲಿನ ನಿವಾಸಿಗಳಾದ ಲಕ್ಷ್ಮಮ್ಮ, ರೇಣುಕಮ್ಮ, ಸುಮಂಗಳಮ್ಮ, ಸಣ್ಣಕ್ಕಿ ಲಕ್ಷ್ಮಮ್ಮ, ಪುಟಾಣಿ ಗಂಗಮ್ಮ, ಹೂಳಮ್ಮ ಇತರರಿದ್ದರು.
ಶೌಚಗೃಹ ಬಳಿಯ ನಿವಾಸಿಗಳಾದ ಲಕ್ಷ್ಮೀ, ಸತ್ಯಮ್ಮ ಮೊದಲಾದವರು ಮಾತನಾಡಿ, ಶೌಚಗೃಹದ ನೀರು ಮನೆ ಮುಂದೆ ಹರಿದು ಬಂದು ದುರ್ವಾಸನೆ ಹರಡುತ್ತಿದೆ. ಶೌಚಗೃಹ ಎದುರು ಎರಡು ಓಣಿಗಳ ಜನ ಇಲ್ಲಿಗೆ ಬಂದು ಕಸ ಹಾಕುವುದರಿಂದ ಗಲೀಜು, ದುರ್ನಾತ ಹೆಚ್ಚಿದೆ. ತಿಪ್ಪೆಕಸವನ್ನು ನಿತ್ಯವೂ ಸ್ವಚ್ಛಗೊಳಿಸಬೇಕು. ಕಸವನ್ನು ತಿಪ್ಪೆಗೆ ಹಾಕದೆ ಕಸದ ವಾಹನಕ್ಕೆ ಹಾಕುವಂತೆ ಪುರಸಭೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಶೌಚಗೃಹವನ್ನು ಸ್ವಚ್ಛವಾಗಿಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಶೌಚಗೃಹವನ್ನು ದುರಸ್ತಿಗೊಳಿಸಲಾಗುವುದು. ಪ್ರತಿಯೊಂದು ಮನೆಯವರು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಬೇಕು. ಸಾರ್ವಜನಿಕ ಶೌಚಗೃಹಗಳ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮಹಿಳೆಯರಿಗೆ ತಿಳಿಸಿದರು.