oplus_10485762 
ಜಿಲ್ಲೆ

ಸ್ಚಚ್ಛಗೊಂಡ ತೂಬಗೆರೆ ಸಮುದಾಯ ಶೌಚಗೃಹ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ತೂಬಗೆರೆ

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಕೇಂದ್ರದಲ್ಲಿನ ಸಮುದಾಯ ಶೌಚಗೃಹಕ್ಕೆ ಕಡೆಗೂ ಸ್ವಚ್ಛತೆಯ ಭಾಗ್ಯ ಸಿಕ್ಕಿದಂತಾಗಿದೆ. ಅನೇಕ ತಿಂಗಳಿಂದ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಮೂಗು ಮುರಿಯುತ್ತಿದ್ದ ದುಸ್ಥಿತಿ ದೂರವಾದಂತಾಗಿದೆ.

ಮುಂದಿನ ತಿಂಗಳ ಗ್ರಾಪಂ ಸಭೆಯಲ್ಲಿ ಶೌಚಗೃಹ ನಿರ್ವಹಣೆಗೆ ಕಾಯಂ ಸಿಬ್ಬಂದಿ ನೇಮಕಕ್ಕೆ ಗ್ರಾಪಂ ನಿರ್ಧಾರ ಮಾಡಿದ್ದು, ಅಲ್ಲಿಯವರೆಗೆ ಗ್ರಾಪಂ ವತಿಯಿಂದಲೇ ಪ್ರತಿನಿತ್ಯ ಶೌಚಗೃಹ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದೆ.

ಗಬ್ಬುನಾರುತ್ತಿದ್ದ ಶೌಚಗೃಹ: ತೂಬಗೆರೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಸಾರ್ವಜನಿಕ ಶೌಚಗೃಹದ ಅವ್ಯವಸ್ಥೆ ಹೇಳತೀರದಾಗಿತ್ತು. ನಿರ್ವಹಣೆ ಕೊರತೆ ಎದುರಿಸುತ್ತಿರುವ ಈ ಶೌಚಗೃಹ ರೋಗರುಜಿನ ಹರಡುವ ತಾಣವಾಗಿ ಪರಿವರ್ತಿತವಾಗಿತ್ತು. ಈ ಬಗ್ಗೆ ಹಲವು ಬಾರಿ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಗ್ರಾಪಂ ಸ್ಪಂದಿಸಿರಲಿಲ್ಲ ಎಂಬ ಅರೋಪ ಕೇಳಿಬಂದಿತ್ತು. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಿದ ವಿಜಯವಾಣಿ ಅ.15ರಂದು ’ಶೌಚಗೃಹಕ್ಕೆ ಕಾಲಿಟ್ಟರೆ ತಲೆಸುತ್ತಿ ಬೀಳೋದು ಪಕ್ಕ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು ಸಿಬ್ಬಂದಿ ಮೂಲಕ ಸ್ವಚ್ಛತಾ ಕಾರ್ಯ ನಡೆಸುವುದರ ಜತೆಗೆ ಪ್ರತಿನಿತ್ಯ ಸ್ವಚ್ಛತೆ ಮಾಡುವುದಾಗಿ ಭರವಸೆ ನೀಡಿದೆ.

ಸಿಇಒ ಚಾಟಿ: ಸ್ವಚ್ಛಭಾರತ್ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡುವಂತೆ ಜಿಪಂ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ತೂಬಗೆರೆ ಗ್ರಾಪಂ ಶೌಚಗೃಹ ನಿರ್ವಹಣೆಗೆ ನಿರ್ಲಕ್ಷ್ಯ ತೋರಿರುವ ಮಾಡಿದ ಪಡೆದ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ತಕ್ಷಣವೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ತೀರ್ಮಾನಿಸಿ ಓರ್ವ ಸಿಬ್ಬಂದಿ ನೇಮಕ ಮಾಡಿ ಪ್ರತಿನಿತ್ಯ ಶೌಚಗೃಹದ ಸ್ವಚ್ಛತೆ ಜತೆಗೆ ನಿರ್ವಹಣೆ ಹೊಣೆ ಹೊರಿಸಲಾಗುವುದು. ಅಲ್ಲಿವರೆಗೆ ಪಂಚಾಯತಿ ವತಿಯಿಂದ ಸ್ವಚ್ಛತೆ ಮಾಡಿಸಲಾಗುವುದು.

ವೆಂಕಟೇಶ್, ಗ್ರಾಪಂ ಪಿಡಿಒ ತೂಬಗೆರೆ