ಜಿಲ್ಲೆ

ಕೈ ಕತ್ತರಿಸುವುದಾಗಿ ಬಹಿರಂಗ ಹೇಳಿಕೆ, ಬಂಧನಕ್ಕೆ ಆಗ್ರಹ

ಆರ್.ಕೃಷ್ಣ

ಮೈಸೂರು: ಕೈ ಕತ್ತರಿಸುವುದಾಗಿ ಬಹಿರಂಗ ಹೇಳಿಕೆ ನೀಡಿರುವ ಹಿಂದುಳಿದ ವರ್ಗಗಳ ವೇದಿಕೆ ಮುಖಂಡ ಕೆ.ಎಸ್.ಶಿವರಾಮು ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಗೌಡ ಲಿಂಗಾಯತ-ಪಂಚಮಸಾಲಿ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಶಂಭು ಪಟೇಲ್ ಎಚ್ಚರಿಸಿದರು.

ಪಂಚಮಸಾಲಿ ಹೋರಾಟದ ಬಗ್ಗೆ ಮಾತನಾಡುತ್ತಾ ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಕೈ ಕಡಿಯುತ್ತೇವೆ ಎಂದು ಶಿವರಾಮು ಪ್ರಚೋದನೆ ಮಾಡಿದ್ದಾರೆ. ಇವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ಈವರೆಗೆ ಪೊಲೀಸರು ಕ್ರಮ ಜರುಗಿಸದೆ ಇರುವುದು ಖಂಡನೀಯ. ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಗೌಡ ಲಿಂಗಾಯತ-ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಶ್ರೀ ಜಯಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಇನ್ನೊಂದು ಸಮುದಾಯಕ್ಕೆ ನೋವುಂಟು ಮಾಡದಂತೆ ದಶಕಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಾಂತಿಯುತ ಹೋರಾಟಕ್ಕೆ ಅವಕಾಶ ಕೊಡದೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ದೂರಿದರು.

3-4 ವರ್ಷಗಳ ಹಿಂದೆ ಕುರುಬರನ್ನು ಎಸ್‌ಟಿಗೆ ಸೇರಿಸುವಂತೆ ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಒತ್ತಾಯ ಮಾಡಿದಾಗ, ಪರಿಶಿಷ್ಟ ಸಮುದಾಯದವರು ಕುರುಬರ ಕೈ ಕಡಿಯುತ್ತೇವೆ ಎಂದು ಹೇಳಿದ್ದರೆ ಎಂದು ಪ್ರಶ್ನಿಸಿದರು.

ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಬಿಟ್ಟು ಮತ್ತೊಂದು ಸಮುದಾಯವನ್ನು ಗೌರವಿಸಬೇಕು. ಇಲ್ಲವಾದರೆ ಹೇಳಿಕೆ ಮುಂದುವರಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಸಂಘಟನೆಯ ಬೆಂಗಳೂರು ವಿಭಾಗ ಕಾರ್ಯದರ್ಶಿ ಆರ್.ಬಿ.ಪಾಟೀಲ್, ಮೈಸೂರು ವಿಭಾಗ ಕಾರ್ಯದರ್ಶಿ ದಯಾನಂದ ಪಾಟೀಲ್, ಮುಖಂಡರಾದ ರಾಜೇಶ್, ಮಧು ಹೆಡಿಯಾಲ ಇದ್ದರು.