ರಾಯಚೂರಿನ ರೈಲ್ವೆ ನಿಲ್ದಾಣದ ವೃತ್ತದಲ್ಲಿ ಸ್ವಚ್ಛತೆಯೇ ಸೇವೆ, ತ್ಯಾಜ್ಯ ಮುಕ್ತ ಭಾರತ ಅಭಿಯಾನದ ನಿಮಿತ್ತ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಕಸಗೂಡಿಸುವ ಮೂಲಕ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ನಗರಸಭೆ ಸದಸ್ಯ ಈ.ಶಶಿರಾಜ, ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ, ಮುಖಂಡರಾದ ರವೀಂದ್ರ ಜಲ್ದಾರ್, ಮುಕ್ತಿಯಾರ್, ಮಹೇಂದ್ರರೆಡ್ಡಿ ಇದ್ದರು. 
ಜಿಲ್ಲೆ

ಸ್ವಚ್ಛತೆಗೆ ಸಾರ್ವಜನಿಕರು ಕೈಜೋಡಿಸಬೇಕು

ರಾಚಯ್ಯ ಸ್ವಾಮಿ

ರಾಯಚೂರು: ಸಾರ್ವಜನಿಕರು ಕೈಜೋಡಿಸದಿದ್ದಲ್ಲಿ ಸ್ವಚ್ಛ ಮತ್ತು ಸುಂದರ ಪರಿಸರ ನಿರ್ಮಾಣ ಅಸಾಧ್ಯವಾಗಿದ್ದು, ಜನರು ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಸ್ಥಳೀಯ ರೈಲ್ವೆ ನಿಲ್ದಾಣದ ವೃತ್ತದಲ್ಲಿ ನಗರಸಭೆಯಿಂದ ಸ್ವಚ್ಛತೆಯೇ ಸೇವೆ, ತ್ಯಾಜ್ಯ ಮುಕ್ತ ಭಾರತ ಕಾರ್ಯಕ್ರಮದಡಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆ ಕಾರ್ಯ ಒಂದು ದಿನಕ್ಕೆ ಸಿಮೀತವಾಗದೆ ನಿರಂತರವಾಗಿ ನಡೆಯುವಂತಾಗಬೇಕು ಎಂದರು.
ತ್ಯಾಜ್ಯ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದು, ದೇಶಾದ್ಯಂತ ಬೆಳಗ್ಗೆ ಒಂದು ಗಂಟೆ ಪ್ರತಿಯೊಬ್ಬರು ತಮ್ಮ ಬಡಾವಣೆಯಲ್ಲಿ ಸ್ವಚ್ಛತೆ ಕಾರ್ಯ ನಡೆಸಬೇಕು. ನಗರಸಭೆ ಸದಸ್ಯರು ಪಕ್ಷಾತೀತವಾಗಿ ವಿವಿಧೆಡೆಯಲ್ಲಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
ಪೌರ ಕಾರ್ಮಿಕರು ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಸಹಕರಿಸಬೇಕು. ಪ್ರತಿಯೊಬ್ಬರು ಕಸವನ್ನು ಬೇಕಾಬಿಟ್ಟಿಯಾಗಿ ಬಿಸಾಡದೇ, ನಗರಸಭೆ ಸಿಬ್ಬಂದಿಗಳು ಬಂದಾಗ ನೀಡುವ ಮೂಲಕ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಡಾ.ಶಿವರಾಜ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಈ.ಶಶಿರಾಜ, ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ, ಮುಖಂಡರಾದ ರವೀಂದ್ರ ಜಲ್ದಾರ್, ಮುಕ್ತಿಯಾರ್, ಮಹೇಂದ್ರರೆಡ್ಡಿ ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.