ವಿಜಯವಾಣಿ ಸುದ್ದಿಜಾಲ ಉಡುಪಿ
ಮಂದಗತಿಯಲ್ಲಿ ನಡೆಯುತ್ತಿರುವ ಸಂತೆಕಟ್ಟೆ ಓವರ್ಪಾಸ್ ಕಾಮಗಾರಿ, ಪ್ರತಿದಿನವೂ ಸ್ಥಳೀಯರಿಗೆ ಆಗುತ್ತಿರುವ ಸಂಚಾರ ಸಮಸ್ಯೆ, ಮುಗಿಯದ ರಸ್ತೆ ಗೋಳು ಖಂಡಿಸಿ ಹಾಗೂ ಸರ್ವೀಸ್ ರಸ್ತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸಂತೆಕಟ್ಟೆ ಕಲ್ಯಾಣಪುರ ನಾಗರಿಕ ಹಿತರಕ್ಷಣಾ ವೇದಿಕೆಯು ಸಂತೆಕಟ್ಟೆಯ ಪೆಟ್ರೋಲ್ ಪಂಪ್ ಬಳಿ ಸೋಮವಾರ ಪ್ರತಿಭಟಿಸಿತು.
ಕಾಮಗಾರಿ ವಿಳಂಬದಿಂದ ಸ್ಥಳೀಯ ವಾಣಿಜ್ಯ ವ್ಯವಹಾರಕ್ಕೂ ಪೆಟ್ಟು ಬಿದ್ದಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಕೂಡಲೇ ಸ್ಕೈವಾಕ್ ನಿರ್ಮಿಸಿಕೊಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಮಿಲಾಗ್ರೀಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಮಾತನಾಡಿ, ಇಲ್ಲಿ ಸ್ಥಳೀಯರಿಗೆ ಏನು ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೋಡಬೇಕು. ಗೊಂದಲದ ಗೂಡಾಗಿರುವ ಸಂತಕಟ್ಟೆಯಲ್ಲಿ ರಸ್ತೆ ದಾಟುವುದಾದರೂ ಎಲ್ಲಿ? ಕಾಲೇಜು ವಿದ್ಯಾರ್ಥಿಗಳಿಗೆ ತುಂಬ ಸಮಸ್ಯೆಯಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಪರ್ಕವೇ ಇಲ್ಲ. ನಮ್ಮ ಕಷ್ಟ ಯಾರಲ್ಲಿ ಹೇಳಿಕೊಳ್ಳುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಡಾ. ಆಕಾಶ್ರಾಜ್ ಜೈನ್ ಮಾತನಾಡಿ, ನಾವು ಯಾರೂ ರಸ್ತೆ ನಿರ್ಮಿಸುವ ತಜ್ಞರಲ್ಲ. ಆದರೂ ಇಲ್ಲಿನ ಕಾಮಗಾರಿ ನೋಡಿದರೆ ಎಂತಹವರಿಗೂ ಅವೈಜ್ಞಾನಿಕವಾಗಿದೆ ಎಂದು ತಿಳಿಯುತ್ತದೆ. ಅಲ್ಪ ದಿನದಲ್ಲಿ ಚಂದ್ರಯಾನವನ್ನೇ ಮುಗಿಸಿದ ನಮಗೆ ಒಂದು ಬಂಡೆ ಒಡೆಯಲು ಆರು ತಿಂಗಳು ಬೇಕೇ? ತಂತ್ರಜ್ಞಾನ ಮುಂದುವರಿದಿದ್ದರೂ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ. ಆಗುತ್ತಿರುವ ಅಪಘಾತ ತಡೆಯಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಧೀರಜ್, ಬಾಲರಾಜ್, ವಿನೋದ್ ಕುಮಾರ್, ನಂದಕುಮಾರ್, ದಿನೇಶ್ ಜತ್ತನ್ನ, ಗಣೇಶ್ ಮೇಸ್ತಾ, ರಾವೇಂದ್ರ ಅಮೀನ್, ಮಲ್ಲಿಕಾ ಪೂಜಾರಿ, ಸುರೇಶ್ ಪೂಜಾರಿ, ಡೈಸಿ ಪಿಂಟೋ, ವೆರೊನಿಕಾ ಕರ್ನೇಲಿಯೋ, ರಿಚರ್ಡ್ ಡಿಸೋಜಾ, ಮೇಬುಲ್ ಡಿಸೋಜಾ, ರೀಟಾ ಲೂಯಿಸ್ ಇತರರು ಹಾಗೂ ಕಾಲೇಜ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರತಿಭಟನಾ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಪ್ರತಿಭಟನಾ ನಿರತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಸಂತೆಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸರಿಯಾಗಿ ರಸ್ತೆ ದಾಟಲೂ ಸಾಧ್ಯವಾಗುತ್ತಿಲ್ಲ. ಕಾಮಗಾರಿ ಮುಗಿಯಲು ಇನ್ನೆಷ್ಟು ವರ್ಷ ಬೇಕು? ಸ್ಥಳೀಯರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದೇವೆ. ಜನರಿಗೆ ಅನುಕೂಲವಾಗುವಂತೆ ಯಾವುದೇ ಪರ್ಯಾಯ ಸೌಕರ್ಯವೂ ಇಲ್ಲ. ನಾವೆಲ್ಲ ಹೇಗೆ ಸಂಚರಿಸಿಬೇಕು ಎಂದು ಆಕ್ರೋಶ ಹೊರಹಾಕಿದರು. ಶಾಸಕ ಯಶ್ಪಾಲ್ ಪ್ರತಿಕ್ರಿಯಿಸಿ, ಗುತ್ತಿಗೆ ಪಡೆದವರು ಕಾಮಗಾರಿ ನಡೆಸುತ್ತಿದ್ದಾರೆ. ರಸ್ತೆ ನಿರ್ಮಿಸುವಾಗ ಬಂಡೆ ಅಡ್ಡ ಬಂದಿದ್ದರಿಂದ ಕಾಮಗಾರಿ ವಿಳಂಬವಾಗಿದೆ ಎಂದರು. ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ಪಡೆದವರಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಉಡುಪಿ ಸಂತೆಕಟ್ಟೆ ಹೆದ್ದಾರಿಯಲ್ಲಿ ಓವರ್ಪಾಸ್ ಕಾಮಗಾರಿ ಚುರುಕುಗೊಳಿಸುವಂತೆ, ಸ್ಥಳೀಯರಿಗೆ ಯಾವುದೇ ಸಮಸ್ಯೆ, ಅಪಘಾತ ಆಗದಂತೆ ಟ್ರಾಫಿಕ್ ನಿಯಂತ್ರಣ ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಪೊಲೀಸರಿಗೆ ಸೂಚಿಸಿದ್ದೇನೆ. ನಾನೂ ಸಹ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನಿರ್ದಿಷ್ಟ ಕಾಲಮಿತಿಯಲ್ಲಿ ಕೆಲಸ ಮುಗಿಸಿ, ಆಗುತ್ತಿರುವ ಸಮಸ್ಯೆ ನೀಗಿಸುವಂತೆ ತಿಳಿಸಿದ್ದೇನೆ. ಯಶ್ಪಾಲ್ ಸುವರ್ಣ. ಶಾಸಕ, ಉಡುಪಿ