ಜಿಲ್ಲೆ

ಸಾರ್ವಜನಿಕರ ಸಮಸ್ಯೆ ತ್ವರಿತ ಪರಿಹಾರಕ್ಕೆ ಬಳ್ಳಾರಿ ಡಿಸಿ, ಜಿಪಂ ಕಚೇರಿಯಲ್ಲಿ ಇ-ಸ್ಪಂದನೆ ಕೋಶ

ಬಳ್ಳಾರಿ: ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಡಳಿತ ಡಿಸಿ ಕಚೇರಿ ಹಾಗೂ ಜಿಪಂ ಕಚೇರಿಯಲ್ಲಿ ಇ-ಸ್ಪಂದನೆ ಕೋಶ ಆರಂಭಿಸಲು ಮುಂದಾಗಿದೆ. ಜನರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ 30 ದಿನ ಕಾಲಾವಕಾಶ ನೀಡಲಾಗಿದೆ.

ಇ-ಸ್ಪಂದನೆ ಕೋಶಕ್ಕೆ ಒಂದು ಮೊಬೈಲ್ ನಂಬರ್ ಅಳವಡಿಸಲಾಗುತ್ತದೆ. ಸಾರ್ವಜನಿಕರು ಕರೆ ಮಾಡಿ ದೂರು ಸಲ್ಲಿಸಿದರೆ ತ್ವರಿತವಾಗಿ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ಕೋಶದಲ್ಲಿರುವ ಸಿಬ್ಬಂದಿ, ದೂರಿನ ವಿವರ ಹಾಗೂ ವಿಳಾಸ ಮತ್ತು ಸಂಬಂಧಿಸಿದ ದಾಖಲೆ ಪಡೆದು ಸಂಬಂಧಿಸಿದ ಅಧಿಕಾರಿಗಳಿಗೆ ಸಂದೇಶ ಕಳಿಸಲಿದ್ದಾರೆ. ಅಧಿಕಾರಿಗಳು ಎಸ್‌ಎಂಎಸ್ ವೆಬ್‌ಲಿಂಕ್‌ನಲ್ಲಿ ಕ್ಲಿಕ್ಕಿಸಿ ದೂರಿನ ಮಾಹಿತಿ ಪಡೆದು ಅಗತ್ಯ ಮಾಹಿತಿ, ದಾಖಲೆ ಕಳಿಸಬೇಕು. ದೂರಿನ ಸ್ವೀಕೃತಿ ದೂರುದಾರರಿಗೂ ನೀಡುವ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದೆ.

ನೋ ಲಾಗಿನ್: ಇ-ಸ್ಪಂದನೆ ಕೋಶಕ್ಕೆ ಮಾತ್ರ ಲಾಗಿನ್ ವ್ಯವಸ್ಥೆಯಿದ್ದು, ಅಧಿಕಾರಿಗಳಿಗೆ ಯಾವುದೇ ರೀತಿಯ ಲಾಗಿನ್ ಇಲ್ಲ. ಎಸ್‌ಎಂಎಸ್‌ನಲ್ಲಿ ಬಂದಿರುವ ವೆಬ್‌ಲಿಂಕ್ ಕ್ಲಿಕ್ಕಿಸಿ, ಕುಂದುಕೊರತೆ ಬಗ್ಗೆ ಕ್ರಮ ನಮೂದಿಸಬೇಕು. ಒಂದು ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ 30 ದಿನ ಕಾಲಾವಶಕಾಶ ನೀಡಲಾಗಿದೆ.

ಇ-ಸ್ಪಂದನೆ ವೆಬ್‌ಸೈಟ್ ಅನ್ನು ಬಳ್ಳಾರಿ ಎನ್‌ಐಸಿ ತಂಡ ಅಭಿವೃದ್ಧಿಪಡಿಸಿದೆ. ಸದ್ಯ ಟ್ರಯಲ್ ಮಾಡಲಾಗುತ್ತಿದ್ದು, ಜ.26ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಎಲ್ಲ ಅಧಿಕಾರಿಗಳು ಇದರ ಬಗ್ಗೆ ತಿಳಿದುಕೊಂಡು ಕಾರ್ಯನಿರ್ವಹಿಸಬೇಕು . ನಿರ್ದಿಷ್ಟ ಸಮಸ್ಯೆಗೆ ಕಾಟಾಚಾರದ ಬದಲು ಸಮರ್ಪಕ ಉತ್ತರ ನೀಡಬೇಕು.| ಎಸ್.ಎಸ್.ನಕುಲ್ ಡಿಸಿ ಬಳ್ಳಾರಿ