ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಶಾಲಾ ಕಾಲೇಜುಗಳ ರಸ್ತೆಯಲ್ಲಿ ಪುಂಡರ ಹಾವಳಿ, ಮಾದಕ ವಸ್ತುಗಳ ಮಾರಾಟ, ಹಳ್ಳಿಗಳಲ್ಲಿ ಮದ್ಯ ಅಕ್ರಮ ಮಾರಾಟ, ಹೆಚ್ಚುತ್ತಿರುವ ಸರ ಅಪಹರಣ, ವಾಹನ, ಮನೆಗಳವು, ಹೆದ್ದಾರಿ ದರೋಡೆ ಹಾಗೂ ವ್ಹೀಲಿಂಗ್ ಪ್ರಕರಣಗಳ ತಡೆ ಸೇರಿ ತಾಲೂಕಿನಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಪೊಲೀಸರ ಮುಂದೆ ಅಹವಾಲು ತೋಡಿಕೊಂಡರು.
ನಗರದ ಶ್ರೀಗೋಪಿ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜುನ್ ಬಾಲದಂಡಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಉಪವಿಭಾಗ ವ್ಯಾಪ್ತಿಯ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಹೆದ್ದಾರಿಯ ಇಕ್ಕೆಲಗಳಲ್ಲಿ ಭಾರೀ ವಾಹನ ನಿಲುಗಡೆ, ನಗರದ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳಿಂದಾಗಿ ಎದುರಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕು ಎಂದು ನಾಗರಿಕರು ಮನವಿ ಮಾಡಿದರು.
ಹಣ ವಸೂಲಿ: ನಗರದ ಬಸ್ ನಿಲ್ದಾಣ ಹಾಗೂ ಬೀದಿ ಬದಿ ವ್ಯಾಪಾರಿಗಳ ಬಳಿ ಪೊಲೀಸರಿಗೆ ಹಣ ನೀಡಬೇಕು ಎಂದು ವ್ಯಕ್ತಿಯೊಬ್ಬ 20 ರಿಂದ 50ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ. ಜತೆಗೆ ಪೊಲೀಸ್ ಠಾಣೆಯಲ್ಲಿ ಕೆಲ ಪ್ರಕರಣಗಳನ್ನು ಬಗೆಹರಿಸಲು ಪೊಲೀಸ್ ಸಿಬ್ಬಂದಿ ಸಾರ್ವಜನಿಕರಿಂದ ಹಣ ಕೇಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು. ಸಮಸ್ಯೆ ಆಲಿಸಿದ ಎಸ್‌ಪಿ ಜನ ಬಯಸುವ ವ್ಯವಸ್ಥೆಯನ್ನು ಒದಗಿಸಿಕೊಡಬೇಕಾದ್ದು ಪೊಲೀಸರ ಕರ್ತವ್ಯ. ಈ ನಿಟ್ಟಿನಲ್ಲಿ ಸಮಸ್ಯೆಗಳಿಗೆ ಶೀಘ್ರ ಕ್ರಮಕೈಗೊಂಡು ಪರಿಹಾರ ಒದಗಿಸಲಾಗುವುದು ಎಂದರು.
ಕಠಿಣ ಕಾನೂನು ಕ್ರಮ ವ್ಹೀಲಿಂಗ್ ಮಾಡಿ ಜನರಿಗೆ ತೊಂದರೆ ಮಾಡುವವರ ವಾಹನಗಳನ್ನು ಜಪ್ತಿ ಮಾಡುವುದಲ್ಲದೇ ವಾಹನ ನೀಡಿದ ಪಾಲಕರ ವಿರುದ್ಧವೂ ಕ್ರಮ ಕೈಗೊಂಡು ಚಾಲನಾ ಪರವಾನಗಿ ರದ್ದು ಮಾಡಲಾಗುವುದು. ಜತಗೆ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುವವರ ಜತೆಗೆ ಇವರಿಗೆ ಸರಬರಾಜು ಮಾಡಿದ ಬಾರ್ ಮಾಲೀಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಸ್‌ಪಿ ಹೇಳಿದರು.
ನ್ಯಾಯಕ್ಕೆ ಬೇಡಿಕೆ ಶ್ರೀನಿವಾಸಪುರ ಗ್ರಾಪಂ ವ್ಯಾಪ್ತಿಯ ಜ್ಯೋಗಿಪಾಳ್ಯ ನಿವಾಸಿ ಶಿವಶಂಕರ್ ಎಂಬುವರು ತಮ್ಮ ಕುಟುಂಬಕ್ಕೆ ಸೇರಿದ ಭೂವಿವಾದ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿದೆ. ಆದರೂ ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಲು ಮುಂದಾಗಿದ್ದರು. ಆದರೆ, ನಮಗೆ ತೊಂದರೆ ಕೊಟ್ಟವರ ಮೇಲೆ ಕ್ರಮ ಕೈಗೊಳ್ಳದೆ, ನಮ್ಮ ಕುಟುಂಬದ 30ಕ್ಕೂ ಹೆಚ್ಚು ಮಂದಿ ಮೇಲೆ ಎಫ್‌ಐಆರ್ ಹಾಕಿದ್ದಾರೆ. ನ್ಯಾಯ ನೀಡುವಂತೆ ಪೊಲೀಸರ ಬಳಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಈ ಕುರಿತು ನಮ್ಮ ಕುಟುಂಬಕ್ಕೆ ನ್ಯಾಯ ನೀಡಬೇಕು ಎಂದು ಎಸ್‌ಪಿ ಬಳಿ ಮನವಿ ಮಾಡಿದರು.
ಮೌನಾಚರಣೆ: ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಇದೇ ವೇಳೆ ಮೌನಾಚರಣೆ ಸಲ್ಲಿಸಲಾಯಿತು. ಡಿವೈಎಸ್‌ಪಿ ಗೌತಮ್, ವೃತ್ತನಿರೀಕ್ಷಕ ರಾಜೀವ್, ಶಶಿಧರ್, ಶಿವಕುಮಾರ್ ಮಾತನಾಡಿದರು. ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್.ಜಿ.ರಾಜು, ನಗರಸಭೆ ಸದಸ್ಯ ಅಂಜನಮೂರ್ತಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ನಾಗರತ್ನಮ್ಮ, ವರ್ತಕರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್, ಮುಖಂಡ ಶ್ರೀನಿವಾಸ್, ಅಂಜನಮೂರ್ತಿ, ರೆಹಮಾನ್, ರಾಮಯ್ಯ ಮತ್ತಿತರರು ಇದ್ದರು.