ಜಿಲ್ಲೆ

ಗ್ರಾಮಸಭೆ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ

ಕಡೂರು: ಗ್ರಾಮಸ್ಥರು ಸರ್ಕಾರ ಯೋಜನೆಗಳ ಬಗ್ಗೆ ಪರಿಪೂರ್ಣ ಮಾಹಿತಿ ಪಡೆದುಕೊಳ್ಳಲು ಗ್ರಾಮಸಭೆಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದು ಗ್ರಾಪಂ ಅಧ್ಯಕ್ಷ ಪಿ.ಆರ್.ರಂಗನಾಥ್ ಹೇಳಿದರು.
ಪಂಚನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಸಭೆಗಳು ಯಶಸ್ವಿಯಾಗಿ ನಡೆಯಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಆದರೆ ಅನಾವಶ್ಯಕ ಪ್ರಶ್ನೆಗಳನ್ನು ಕೇಳುವ ಮೂಲಕ ಸಮಯ ವ್ಯರ್ಥ ಮಾಡಬಾರದು. ಅಧಿಕಾರಿಗಳಿಗೆ ಸೂಕ್ತ ಪ್ರಶ್ನೆಗಳನ್ನು ಕೇಳಿ ಅವರಿಂದ ಸಮರ್ಪಕ ಉತ್ತರಪಡೆದುಕೊಳ್ಳ ಬೇಕು. ಗ್ರಾಪಂನಿಂದ ದೊರೆಯಬಹುದಾದ ಸವಲತ್ತುಗಳನ್ನು ಪಡೆಯಲು, ಅರ್ಜಿಸಲ್ಲಿಸಲು ಗ್ರಾಮ ಸಭೆಯಲ್ಲಿ ಅವಕಾಶವಿದೆ ಎಂದರು.
ಗ್ರಾಮಸ್ಥ ಪಿ.ಎಸ್.ಸುಶೀಲ್ ಕುಮಾರ್ ಮಾತನಾಡಿ, ಕೋಳಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದರು ಗ್ರಾಪಂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಗ್ರಾಮಸ್ಥ ಪ್ರಶಾಂತ್ ಮಾತನಾಡಿ, ವಿವಿಧ ಯೋಜನೆ ಅಡಿಯಲ್ಲಿ ಲಾನುಭವಿಗಳಿಗೆ ಬರುವ ಹಣವನ್ನು ಬ್ಯಾಂಕ್‌ನವರು ಸಾಲದ ಕಂತಿಗೆ ಕಡಿತ ಮಾಡಿಕೊಳ್ಳಬಾರದೆಂಬ ಸರ್ಕಾರದ ಆದೇಶವನ್ನು ಪಂಚನಹಳ್ಳಿ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ಪಾಲಿಸುತ್ತಿಲ್ಲ. ಸಾಲದ ಹಣಕ್ಕೆ ವಿಧವಾ ವೇತನ, ವೃದ್ದಾಪ್ಯ ವೇತನ, ನರೇಗಾ ಯೋಜನೆ ಹಣ ಸೇರಿದಂತೆ ಸರ್ಕಾರದಿಂದ ಬರುವ ವಿವಿಧ ಯೋಜನೆಗಳ ಹಣ ಕಡಿತ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆನರಾ ಬ್ಯಾಂಕ್ ಕೃಷಿ ವಿಸ್ತರಣಾಧಿಕಾರಿ ಆರ್.ಮನು ಮಾತನಾಡಿ, ಈ ರೀತಿ ಸರ್ಕಾರದ ಆದೇಶವಿಲ್ಲ. ಆದೇಶ ಪ್ರತಿ ತಂದು ಕೊಟ್ಟರೆ ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಸಾಲದ ಖಾತೆ ಮತ್ತು ಉಳಿತಾಯ ಖಾತೆ ಎರಡು ಲಿಂಕ್ ಆಗಿರುವುದರಿಂದ ಉಳಿತಾಯ ಖಾತೆಗೆ ಬರುವ ಯಾವುದೇ ಹಣ ಸುಸ್ತಿ ಸಾಲಕ್ಕೆ ಕಡಿತವಾಗುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ರೂಪ ಶ್ರೀನಿವಾಸ್, ಸದಸ್ಯರಾದ ಸಾವೆ ಮರುಳಪ್ಪ, ಪಿ.ಎಂ.ಪಾಪಣ್ಣ, ಪಿ.ಎಸ್.ಸಂತೋಷ್, ಆರ್.ರೇಖಾ, ಶೀಲಾ, ಪಿಡಿಒ ಬಿ.ಎಂ.ಪುಷ್ಪ ಮತ್ತಿತರರು ಇದ್ದರು.