ಜಿಲ್ಲೆ

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅವಶ್ಯ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು: ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯವಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ನಗರದ ಸೇಠ್ ಮೋಹನ್‌ದಾಸ್ ತುಳಸಿದಾಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸೆ.17ರಿಂದ ಅ.2ರವರೆಗೆ ಹಮ್ಮಿಕೊಂಡಿರುವ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಬಲಪಡಿಸುವ ಆರೋಗ್ಯ ಶಿಬಿರಗಳ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬ ನಾಗರಿಕನು ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಸ್ವಸ್ಥ, ಸಶಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ದೃಷ್ಟಿಯಿಂದ ಹಮ್ಮಿಕೊಂಡಿರುವ ಸ್ವಸ್ಥ ನಾರಿ, ಸಶಕ್ತ ಅಭಿಯಾನವನ್ನು ಯಶಸ್ವಿಯಾಗಬೇಕು. ಈ ಮೂಲಕ ದೇಶದ ಪ್ರಗತಿಗೆ ಸಹಕಾರ ನೀಡಬೇಕು ಎಂದರು.

ಆರೋಗ್ಯ ಇಲಾಖೆ ಮೈಸೂರು ವಿಭಾಗದ ವಿಭಾಗೀಯ ನಿರ್ದೇಶಕಿ ಡಾ.ಮಲ್ಲಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಸಿ.ಪಿ.ಕುಮಾರಸ್ವಾಮಿ, ಜಿಲ್ಲಾ ಆರ್‌ಸಿಎಚ್ ಡಾ.ಸಿರಾಜ್ ಅಹಮದ್, ಜಿಲ್ಲಾ ರೋಗವಾಹಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುವರ್ಣ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಬೃಂದಾ, ತಾಲೂಕು ಆರೋಗ್ಯಾಧಿಕಾರಿ ಡಾ.ಪುಟ್ಟತಾಯಮ್ಮ, ರಾಜ್ಯಮಟ್ಟದ ಅಧಿಕಾರಿ ಡಾ.ರಾಜು, ಎಸ್‌ಎಂಟಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅನುರಾಧಾ ಇತರರಿದ್ದರು.