ಜಿಲ್ಲೆ

ಧರ್ಮಸ್ಥಳ ರಕ್ಷಣೆಗೆ ಗೋಡೆಗಳಾಗಿ ನಿಲ್ಲಬೇಕಿದೆ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ನಮ್ಮ ನಾಡಿನ ಅಸ್ಮಿತೆಯಾಗಿರುವ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರಗಳಿಗೆ ನಾವು ಉತ್ತರಿಸುವ ಅನಿವಾರ್ಯತೆ ಎದುರಾಗಿದೆ. ಕ್ಷೇತ್ರದ ಹೆಸರಿಗೆ ಕಳಂಕ ತಂದು, ಅಪಪ್ರಚಾರ ನಡೆಸುತ್ತಿರುವವರು ಮತ್ತು ಧರ್ಮ ಕಾರ್ಯಗಳನ್ನು ವಿನಾಶಗೊಳಿಸುವುದಕ್ಕೆ ಪ್ರಯತ್ನಿಸುವವರ ವಿರುದ್ಧ ನಾವು ಗೋಡೆಗಳಾಗಿ ನಿಲ್ಲಬೇಕಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾಪು ನೇತೃತ್ವದಲ್ಲಿ ಹಳೇ ಮಾರಿಯಮ್ಮ ದೇವಸ್ಥಾನ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಜನಾಗ್ರಹ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ, ಸೌಜನ್ಯಾ ಪ್ರಕರಣ ಅತ್ಯಂತ ದುರಾದೃಷ್ಟಕರವಾಗಿದೆ. ಪ್ರಕರಣದಲ್ಲಿ ಹೋರಾಟಗಾರರರೇ ತನಿಖೆಯ ದಾರಿ ತಪ್ಪಿಸಿದ್ದಾರೆ. ಆರೋಪಿ ಸಂತೋಷ್ ರಾವ್‌ನನ್ನು ಮಂಪರು ಪರೀಕ್ಷೆಗೊಳಪಡಿಸುವ ಕುರಿತಾಗಿ ಗೊಂದಲದ ಹೇಳಿಕೆಗಳು ಕೇಳಿ ಬಂದಿವೆ. ಈ ಬಗ್ಗೆ ಎಷ್ಟು ಬಾರಿ ಕೇಳಿದರೂ ಅದನ್ನು ದೃಢೀಕರಿಸಲು ಹೋರಾಟಗಾರರಿಗೆ ಸಾಧ್ಯವಾಗಿಲ್ಲ ಎಂದರು.

ದಾಮೋದರ ಶರ್ಮ ಬಾರ್ಕೂರು, ವಕೀಲೆ ಸಹನಾ ಕುಂದರ್ ದಿಕ್ಸೂಚಿ ಭಾಷಣ ಮಾಡಿದರು. ಸಭೆ ಬಳಿಕ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ದಯಾನಂದ ಹೆಜಮಾಡಿ, ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಪ್ರಸಾದ್ ಶೆಣೈ, ರಾಮ ನಾಯಕ್, ಗೀತಾಂಜಲಿ ಸುವರ್ಣ, ನೀರೆ ಕೃಷ್ಣ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ನಾಗರಾಜ್ ರಾವ್ ಪಾಂಗಾಳ, ಸತ್ಯೇಂದ್ರ ಪೈ, ಜಯಶೀಲ ಹೆಗ್ಡೆ, ಅನಿಲ್ ಕುಮಾರ್, ರವೀಂದ್ರ ಪಡುಬೆಳ್ಳೆ, ಇನ್ನಾ ಉದಯ ಶೆಟ್ಟಿ, ಸೂಡ ಶಂಕರ್ ಕುಂದರ್ ಉಪಸ್ಥಿತರಿದ್ದರು. ನವೀನ್ ಅಮೀನ್ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.