ಹರಪನಹಳ್ಳಿಯ ಸಾರ್ವಜನಿಕ ಗ್ರಂಥಾಲಯ ಹೊರನೋಟ. 
ಜಿಲ್ಲೆ

ಅವ್ಯವಸ್ಥೆ ಆಗರ ಹರಪನಹಳ್ಳಿ ಲೈಬ್ರರಿ

ಹಳೇ ಕಟ್ಟಡದಲ್ಲಿ ವಿದ್ಯಾರ್ಥಿಗಳು, ಜನರ ಓದು ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳ ಕೊರತೆ


ಬಿ.ವೈ. ದುರುಗೇಶ್

ಹರಪನಹಳ್ಳಿ: ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಹಳೇ ಕಟ್ಟಡವಾಗಿದ್ದು, ಶಿಥಿಲಗೊಂಡಿದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳು ಇಲ್ಲದ ಕಾರಣ ವಿವಿಧ ಹುದ್ದೆ ಆಕಾಂಕ್ಷಿಗಳಿಗೆ ಸಮಸ್ಯೆಯಾಗಿದೆ.

ಗ್ರಂಥಾಲಯ ಕಟ್ಟಡ 1997-98ರಲ್ಲಿ ನಿರ್ಮಿಸಲಾಗಿದ್ದು, ಮಳೆಗೆ ಸೋರುತ್ತದೆ. ಇದರಿಂದ ಓದುಗರಿಗೆ ತೊಂದರೆಯಾಗುತ್ತಿದೆ. ಕಟ್ಟಡದ ಸುತ್ತ ಕಸ ಬೆಳೆದಿದೆ. ಮುಂಭಾಗದ ಆವರಣ ಕೆರೆಯಂತಾಗಿದ್ದು, ಸೊಳ್ಳೆಗಳ ತಾಣವಾಗುತ್ತದೆ. ಗ್ರಂಥಾಲಯ ಪ್ರವೇಶಿಸಲು ಕಲ್ಲು, ಇಟ್ಟಿಗೆಗಳನ್ನು ಬಳಸಿ ಕಾಲುದಾರಿ ನಿರ್ಮಿಸಿಕೊಳ್ಳುವ ಪರಿಸ್ಥಿತಿ ಇದೆ. ನೀರು ನಿಂತು ಹೊರಾಂಗಣದಲ್ಲಿ ಪಾಚಿಗಟ್ಟಿದ್ದು, ಓದುಗರು ಕಾಲುಜಾರಿ ಬಿದ್ದ ಪ್ರಸಂಗಗಳು ನಡೆದಿವೆ.

ಗ್ರಂಥಾಲಯ ಮುಂದೆ ನೀರು ನಿಂತು ಪಾಚಿಗಟ್ಟಿ ರುವುದು.

ಶುದ್ಧ ನೀರಿನ ಘಟಕ ನಿರ್ವಹಣೆ ಇಲ್ಲದೇ ಕೆಟ್ಟು ಹೋಗಿದ್ದು ದುರಸ್ತಿ ಮಾಡಿಸಿಲ್ಲ. ಹೀಗಾಗಿ ಸಿಬ್ಬಂದಿ ಪ್ರತಿನಿತ್ಯ ಹೊರಗಡೆಯಿಂದ ನೀರು ತರುತ್ತಾರೆ. ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಾರೆ. ಇಲ್ಲಿ 17 ಸಾವಿರ ಪುಸ್ತಕಗಳಿವೆ. ಅದರಲ್ಲಿ ಬಹುತೇಕ ಕಥೆ, ಕಾದಂಬರಿ, ಇತರ ಪುಸ್ತಕಗಳಿವೆ. ಸರ್ಕಾರದ ಯೋಜನೆಗಳನ್ನು ಒಳಗೊಂಡ ಯೋಜನಾ ಮಾಸಿಕ ಪುಸ್ತಕ, ಕುರುಕ್ಷೇತ್ರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳು ಇಲ್ಲ. ಈ ಕುರಿತು ಗ್ರಂಥಾಲಯ ಅಧಿಕಾರಿ, ಪುರಸಭೆ, ತಾಲೂಕು ಪಂಚಾಯಿತಿಗಳಿಗೆ ಹಲವಾರು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಓದುಗಾರರ ದೂರುತ್ತಾರೆ.

ಗ್ರಂಥಾಲಯದಲ್ಲಿ 1400 ಓದುಗರು ನೋಂದಾಯಿತ ಸದಸ್ಯರಿದ್ದಾರೆ. ಕಟ್ಟಡ ಇಕ್ಕಟ್ಟಾಗಿರುವ ಕಾರಣ ತೊಂದರೆಯಾಗುತ್ತಿದೆ. ಆಸನಗಳ ವ್ಯವಸ್ಥೆ ಸರಿಯಾಗಿಲ್ಲ. ಗ್ರಂಥಾಲಯಕ್ಕೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಭೇಟಿ ನೀಡಿ ಮೂಲ ಸೌಕರ್ಯಗಳ ಕೊರತೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ಅವಧಿಯಲ್ಲಿ ನೂತನ ಗ್ರಂಥಾಲಯ ನಿರ್ಮಾಣಕ್ಕಾಗಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಬೆನ್ನೂರು ಆಚಾರ್ಯ ಬಡಾವಣೆಯಲ್ಲಿ ಸ್ಥಳ ಗುರುತಿಸಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ 52 ಲಕ್ಷ ರೂ. ಮೀಸಲಿರಿಸಿದ್ದರೂ ಎರಡು ವರ್ಷಗಳಿಂದ ಟೆಂಡರ್ ಪ್ರಕ್ರಿಯೆ ನಡೆಯದೇ ನನೆಗುದಿಗೆ ಬಿದ್ದಿದ್ದು, ತ್ವರಿತ ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಗ್ರಂಥಾಲಯದ ಕಟ್ಟಡ ನಿರ್ಮಾಣ ಟೆಂಡರ್ ಹಂತದಲ್ಲಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದುಎರಗುಡಿ ಶಿವಕುಮಾರ್ಪುರಸಭೆ ಮುಖ್ಯಾಧಿಕಾರಿ
ನೂತನ ಗ್ರಂಥಾಲಯ ನಿರ್ಮಾಣ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ವಿಚಾರಿಸಿದರೆ ಟೆಂಡರ್ ಹಂತದಲ್ಲಿದೆ ಎನ್ನುತ್ತಿದ್ದಾರೆ. ಆದರೆ, ಯಾವುದೇ ಕೆಲಸಗಳು ಆಗುತ್ತಿಲ್ಲ. ಮೂಲಸೌಲಭ್ಯಗಳ ಕೊರತೆ ಬಗ್ಗೆ ಓದುಗರು ಪ್ರಶ್ನಿಸುತ್ತಿದ್ದು, ಅವರಿಗೆ ಏನು ಹೇಳಬೇಕು ಎಂಬುದು ತಿಳಿಯದಂತಾಗಿದೆ.| ಬಿ.ನಾರಾಯಣದಾಸ ಗ್ರಂಥಾಲಯಾಧಿಕಾರಿ, ಹರಪನಹಳ್ಳಿ
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳ ಮಾಹಿತಿ ಪಡೆದು ಶೀಘ್ರದಲ್ಲಿಯೇ ವ್ಯವಸ್ಥೆ ಮಾಡಲು ಕ್ರಮವಹಿಸ ಲಾಗುವುದು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಕಟ್ಟಡ ನಿರ್ಮಾಣದ ಬಗ್ಗೆ ವಿಚಾರಿಸಲಾಗುವುದು.| ಲಕ್ಷ್ಮೀ ಕಿರಣ ಉಪನಿರ್ದೇಶಕಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಬಳ್ಳಾರಿ