ರಾಯಚೂರು ನಗರದಲ್ಲಿ ಜೆಸ್ಕಾಂ ಇಲಾಖೆಯಿಂದ ಯಾವುದೇ ಮುನ್ಸೂಚನೆ ನೀಡದೆ ನಿತ್ಯ 6 ರಿಂದ 7 ಗಂಟೆ ವಿದ್ಯುತ್ ಕಡಿತದಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ 12 ದಿನ ಪೂರ್ತಿದಿನ ವಿದ್ಯುತ್ ಕಡಿತಗೊಳಿಸಿ ಗ್ರಾಹಕರು ತೊಂದರೆ ಅನುಭವಿಸುವಂತೆ ಮಾಡುತ್ತಿದ್ದು, ಸೆಕ್ಟರ್ ಎಂಜಿನಿಯರ್‌ಗಳಿಗೇ ಸರಿಯಾಗಿ ಮಾಹಿತಿ ನೀಡದೇ ವಿದ್ಯುತ್ ಕಡಿತಗೊಳಿಸುತ್ತಿರುವ ಜೆಸ್ಕಾಂ ಅಧಿಕಾರಿಗಳಲ್ಲೂ ಅಸಮಾಧಾನ ಮೂಡಿಸಿದೆ.
ನಗರದ ಡ್ಯಾಡಿ ಕಾಲೊನಿ, ಕಾಕತೀಯ ಕಾಲೊನಿ, ಏಳುಮಕ್ಕಳತಾಯಿ ದೇವಸ್ಥಾನ, ಆಕ್ಸ್‌ಫರ್ಡ್ ಶಾಲೆ ಪರಿಸರದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ವಿದ್ಯುತ್ ಕಡಿತಗೊಳಿಸಿ, ಸಂಜೆ 6 ಗಂಟೆಗೆ ವಿದ್ಯುತ್ ಪೂರೈಕೆ ಮಾಡಲಾಯಿತು. ಭಾನುವಾರ ಬೆಳಿಗ್ಗೆ 10.30ಕ್ಕೆ ವಿದ್ಯುತ್ ಕಡಿತಗೊಳಿಸಿದ ಕಾರಣ ದಿನವಿಡೀ ಗ್ರಾಹಕರು ತೊಂದರೆ ಅನುಭವಿಸಬೇಕಾಯಿತು.
ಡ್ಯಾಡಿಕಾಲೊನಿಯಲ್ಲಿರುವ ಒಂದು ಬಡಾವಣೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಇದ್ದಾರೆ. ಅವರ ಮನೆಗಳಿಗೆ ಮಾತ್ರ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ. ಏಳುಮಕ್ಕಳತಾಯಿ ದೇವಸ್ಥಾನ ಸುತ್ತಮುತ್ತಲಿನ ಪರಿಸರದ ಜನ ಒಂದು ತಿಂಗಳಿಂದ ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಹಾಗೂ ಸೋಮವಾರ ದಿನವಿಡೀ ಸಮಸ್ಯೆ ಎದುರಿಸುತ್ತಿದ್ದಾರೆ.
ತಾಂತ್ರಿಕ ಕಾರಣ ಹಾಗೂ ಹೊಸ ಲೈನ್ ಎಳೆಯುತ್ತಿರುವ ಕಾರಣ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಸೋಮವಾರದ ವೇಳೆಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಮುಂದೆ ಈ ಸಮಸ್ಯೆ ಎದುರಾಗುವುದಿಲ್ಲ. ಸಾರ್ವಜನಕರ ಸಹಕಾರ ಅಗತ್ಯ ರವಿಚಂದ್ರನ್ ಜೆಸ್ಕಾಂ ಸೆಕ್ಟರ್ ಎಂಜಿನಿಯರ್ ರಾಯಚೂರು